ವಿಷಕಾರಿ ಕಂಪನಿಗಳ ಬಂದ್‌ ಗ್ಯಾರಂಟಿ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : Jul 29, 2025, 01:00 AM IST
ಯಾದಗಿರಿಯ ಕನ್ನಡಪ್ರಭ ಕಚೇರಿಗೆ ಔಪಚಾರಿಕ ಭೇಟಿ ನೀಡಿದ ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಸ್ವಾಗತಿಸಿ, ಕಡೇಚೂರ ಬಾಡಿಯಾಳ ಕೈಗಾರಿಕಾ ಪ್ರದೇಶದ ಕುರಿತು ಕನ್ನಡಪ್ರಭದಲ್ಲಿ ಏ.9 ರಿಂದ ನಿರಂತರವಾಗಿ ಈವರೆಗೆ ಪ್ರಕಟಗೊಂಡ 111 ಸರಣಿ ವರದಿಗಳ ಪ್ರತಿಗಳುಳ್ಳ ಪುಸ್ತಿಕೆಯನ್ನು ನೀಡಿ, ಗಮನ ಸೆಳೆಯಲಾಯಿತು. | Kannada Prabha

ಸಾರಾಂಶ

ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ವ್ಯಕ್ತವಾಗಿರುವ ಆತಂಕದ ಬಗ್ಗೆ ಮಾಹಿತಿ ಕಲೆ ಹಾಕಲು ಪರಿಸರ ಮಂಡಳಿ ಜೊತೆ ಮಾತನಾಡಿ, ಪ್ರತ್ಯೇಕ ಸಮಿತಿ ರಚಿಸುವ ಮೂಲಕ ಅಧ್ಯಯನ ಹಾಗೂ ಕ್ರಮಕ್ಕೆ ಮುಂದಾಗುವುದಾಗಿ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ -ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಾನಿಲ- ದುರ್ನಾತದಿಂದಾಗಿ ಅಲ್ಲಿನ ಜನ-ಜಲ ಜೀವನ, ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ವ್ಯಕ್ತವಾಗಿರುವ ಆತಂಕದ ಬಗ್ಗೆ ಮಾಹಿತಿ ಕಲೆ ಹಾಕಲು ಪರಿಸರ ಮಂಡಳಿ ಜೊತೆ ಮಾತನಾಡಿ, ಪ್ರತ್ಯೇಕ ಸಮಿತಿ ರಚಿಸುವ ಮೂಲಕ ಅಧ್ಯಯನ ಹಾಗೂ ಕ್ರಮಕ್ಕೆ ಮುಂದಾಗುವುದಾಗಿ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸೋಮವಾರ ಆಗಮಿಸಿದ್ದ ಅವರು, ನಂತರ ಈ ಕುರಿತು ‘ಕನ್ನಡಪ್ರಭ’ ಜತೆ ಮಾತನಾಡಿದರು. ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಜನರ ಸ್ಥಿತಿಗತಿ ಕುರಿತು ‘ಕನ್ನಡಪ್ರಭ’ದಲ್ಲಿ ಪ್ರಕಟಗೊಳ್ಳುತ್ತಿರುವ ಸರಣಿ ವರದಿಗಳನ್ನು ಗಮನಿಸುತ್ತಿರುವುದಾಗಿ ತಿಳಿಸಿದ ಅವರು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು, ಈ ಹಿಂದೆ 27 ಕಂಪನಿಗಳಿಗೆ ಜಿಲ್ಲಾಡಳಿತ ನೋಟಿಸ್‌ ನೀಡಿದ್ದ ಬಗ್ಗೆ ಸೇರಿದಂತೆ ಕೆಲವೊಂದು ಬೆಳವಣಿಗೆಗಳು ಗಮನಕ್ಕೆ ಬಂದಿವೆ. ಜನರ ಆರೋಗ್ಯಕ್ಕೆ ಮಾರಕವಾಗಿರುವ ವಿಷಕಾರಿ ಕಂಪನಿಗಳು ಬಂದ್‌ ಆಗಲೇಬೇಕು ಎಂದು ಹೇಳಿದರು.

‘ಕನ್ನಡಪ್ರಭ’ ಸರಣಿ ವರದಿಗಳ ಆಧಾರದ ಮೇಲೆ ಈ ಹಿಂದೆ ತಾವು ಇಲಾಖೆಯ ಅಪರ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೆವು, ಸಮಿತಿಯ ವರದಿಯನ್ನೂ ಗಮನಿಸುತ್ತೇನೆ. ಜನರ ಜೀವಕ್ಕೆ, ಪ್ರಾಣಿ, ಪಕ್ಷಿ, ಹಳ್ಳ-ಕೊಳ್ಳ-ನದಿಗಳು, ಜಲಚರಗಳು, ಪರಿಸರಕ್ಕೆ ಕುತ್ತು ತರುವಂತಹ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಧ್ಯಾಹ್ನ ಕನ್ನಡಪ್ರಭ ಕಚೇರಿಗೆ ಔಪಚಾರಿಕ ಭೇಟಿ ನೀಡಿದ ಅವರನ್ನು ಸ್ವಾಗತಿಸಿ, ಕಡೇಚೂರ ಬಾಡಿಯಾಳ ಕೈಗಾರಿಕಾ ಪ್ರದೇಶದ ಕುರಿತು ಕನ್ನಡಪ್ರಭದಲ್ಲಿ ಏ.9ರಿಂದ ನಿರಂತರವಾಗಿ ಈವರೆಗೆ ಪ್ರಕಟಗೊಂಡ 111 ಸರಣಿ ವರದಿಗಳ ಪ್ರತಿಗಳುಳ್ಳ ಸಂಗ್ರಹದ ಪುಸ್ತಿಕೆಯನ್ನು ನೀಡಿ, ಗಮನ ಸೆಳೆಯಲಾಯಿತು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

ಕೈಗಾರಿಕಾ ಹಟಾವೋ, ಸೈದಾಪುರ ಬಚಾವೋ ತಂಡದಿಂದ ಮನವಿ

ಈ ಮಧ್ಯೆ, ಯಾದಗಿರಿಗೆ ಆಗಮಿಸಿದ್ದ ಸಚಿವ ಈಶ್ವರ ಖಂಡ್ರೆಯವರನ್ನು ಭೇಟಿ ಮಾಡಿದ ಕೈಗಾರಿಕಾ ಹಟಾವೋ, ಸೈದಾಪುರ ವಲಯ ಬಚಾವೋ ಸಮಿತಿ ತಂಡ, ಅಲ್ಲಿನ ವಾಸ್ತವತೆಯ ವಿವರಿಸಿ, ಜನರ ಜೀವಕ್ಕೆ ಕಂಟಕವಾಗಿರುವ ವಿಷಕಾರಿ ಕಂಪನಿಗಳ ಬಂದ್‌ ಮಾಡಿಸುವಂತೆ ಮನವಿ ಮಾಡಿದರು.

ಜಿಲ್ಲಾ ಗ್ಯಾರೆಂಟ್ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶ್ರೇಣಿಕಕುಮಾರ ದೋಕಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ಸೈದಾಪುರ ವಲಯ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ದುಪ್ಪಲ್ಲಿ, ಕುರುಬ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಕೈಗಾರಿಕಾ ಹಟವೋ, ಸೈದಾಪುರ ವಲಯ ಬಚಾವೋ ಹೋರಾಟ ಸಮಿತಿಯ ಸಂಚಾಲಕರಾದ ಭೀಮಣ್ಣ ವಡವಟ್, ವೀರೇಶ ಸಜ್ಜನ್, ಭೀಮಣ್ಣ ಮಡಿವಾಳ್ಕರ್, ಮಣಿಕಂಠ ನಾಟೇಕರ್ ಕ್ಯಾತ್ನಾಳ್ ಇತರರು ಇದ್ದರು.

‘ಕನ್ನಡಪ್ರಭ’ದಲ್ಲಿ ಪ್ರಕಟಗೊಳ್ಳುತ್ತಿರುವ ಸರಣಿ ವರದಿಗಳನ್ನು ಗಮನಿಸುತ್ತಿದ್ದೇನೆ. ಇವುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಈ ಹಿಂದೆ 27 ಕಂಪನಿಗಳಿಗೆ ಜಿಲ್ಲಾಡಳಿತ ನೋಟಿಸ್‌ ನೀಡಿದ್ದ ಬಗ್ಗೆ ಸೇರಿದಂತೆ ಕೆಲವೊಂದು ಬೆಳವಣಿಗೆಗಳು ಗಮನಕ್ಕೆ ಬಂದಿವೆ. ಪ್ರತ್ಯೇಕ ಸಮಿತಿ ರಚಿಸುವ ಮೂಲಕ ಅಧ್ಯಯನ ಹಾಗೂ ಕ್ರಮಕ್ಕೆ ಮುಂದಾಗುತ್ತೇವೆ.

ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ