- ಸಿ.ಟಿ.ರವಿ ಆಸ್ಪತ್ರೆಗೆ ದಿಢೀರ್‌ ಭೇಟಿ । ಹೊರ ರೋಗಿ ಮತ್ತು ಒಳ ರೋಗಿ ವಿಭಾಗದ ವಾರ್ಡ್‌ಗಳಿಗೆ ಭೇಟಿಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ತುರ್ತು ಚಿಕಿತ್ಸೆಗೆ ಚೀಟಿ ಪಡೆಯುವುದಕ್ಕೆ ಉದ್ದನೆಯ ಸಾಲು, ತುರ್ತು ಮಹಿಳಾ ವಾರ್ಡ್‌ನಲ್ಲಿ ಪುರುಷ ರೋಗಿ ದಾಖಲು, ಚೀಟಿ ಬರೆದುಕೊಂಡು ಹೊರಗಿನಿಂದ ಖರೀದಿಸಿದ ತಂದ ಔಷಧಿಯಿಂದ ಚಿಕಿತ್ಸೆ, ಸ್ವಚ್ಛತೆ ಇಲ್ಲ.

ಇದು ನಗರದ ಅರಳುಗುಪ್ಪೆ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಕಂಡು ಬಂದ ದೃಶ್ಯಗಳು.

ಸೋಮವಾರ ಮಧ್ಯಾಹ12.30ರ ಸುಮಾರಿಗೆ ಸಿ.ಟಿ,ರವಿ ದಿಢೀರ್‌ನೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಹೊರ ರೋಗಿ ಮತ್ತು ಒಳ ರೋಗಿ ವಿಭಾಗದ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಬಹುತೇಕ ರೋಗಿಗಳಿಗೆ ವೈದ್ಯರು, ಕೆಲವು ಔಷಧಿ ಚೀಟಿ ಬರೆದುಕೊಟ್ಟು, ಖಾಸಗಿ ಮೆಡಿಕಲ್‌ ಶಾಪ್‌ನಿಂದ ಖರೀದಿ ಮಾಡಿ ತಂದರೆ ಆ ಔಷಧಿ ಬಳಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂಬುದು ತಿಳಿದು ಬಂದಿದೆ


ಈ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯ ಸಂಬಂಧಿಗಳು ಸಿ.ಟಿ.ರವಿ ಗಮನಕ್ಕೆ ತಂದರು. ಸ್ಥಳದಲ್ಲಿ ಹಾಜರಿದ್ದ ವೈದ್ಯರು, ತುರ್ತು ಸಂದರ್ಭದಲ್ಲಿ ಕೆಲವು ಔಷಧಿ ಬೇಕಾಗಲಿದೆ. ಆ ಔಷಧಿ ಮಾತ್ರ ಖರೀದಿ ಮಾಡಿ ತರುವುದಕ್ಕೆ ಸೂಚಿಸಲಾಗುತ್ತದೆ. ಉಳಿದಂತೆ ಆಸ್ಪತ್ರೆ ಔಷಧಿಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಡಾಕ್ಟರ್‌ ಇಲ್ಲ, ವಿದ್ಯಾರ್ಥಿಗಳಿಂದ ಚಿಕಿತ್ಸೆ: ಆರೋಪ

ರೋಗಿಯೊಬ್ಬರು, ದಂತ ಚಿಕಿತ್ಸೆಗೆ ಚೀಟಿ ಮಾಡಿಸುವುದಕ್ಕೆ 30 ನಿಮಿಷ ಬೇಕು. ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಇಲ್ಲ ಎಂದರೆ ಸ್ಕ್ಯಾನಿಂಗ್‌ಗೆ ಹಣ ಕೊಡಬೇಕು. ದಂತ ವೈದ್ಯಕೀಯ ವಿಭಾಗದಲ್ಲಿ ಡಾಕ್ಟರ್‌ ಇರುವುದಿಲ್ಲ. ಪರೀಕ್ಷಾರ್ಥಿ ಕಾಲೇಜು ವಿದ್ಯಾರ್ಥಿಗಳು ಚಿಕಿತ್ಸೆ ನೀಡುವ ಪರಿಸ್ಥಿತಿ ಇದೆ ಎಂದು ಸಿ.ಟಿ.ರವಿ ಅವರಿಗೆ ದೂರು ಹೇಳಿದರು. ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ವೈದ್ಯರಿಗೆ ಸೂಚಿಸಿದರು.

ಡಯಾಲಿಸಿಸ್‌ ವಿಭಾಗದ ತಪಾಸಣೆ

ಇತ್ತೀಚಿಗೆ ಡಯಾಲಿಸಿಸ್‌ಗೆ ಆಗಮಿಸಿದ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದು ದೂರು ಬರುತ್ತಿವೆ. ಏನು ಸಮಸ್ಯೆ ಎಂದು ಸಿ.ಟಿ.ರವಿ ಪ್ರಶ್ನಿಸಿದರು. ಉತ್ತರಿಸಿದ ಡಯಾಲಿಸಿಸ್‌ ವಿಭಾಗದ ಉಸ್ತುವಾರಿ ಅಧಿಕಾರಿ ಕೆಳೆದ ವಾರ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಗಿತ್ತು. ಇದೀಗ ಎಲ್ಲ ಸಮಸ್ಯೆ ಸರಿಯಾಗಿದೆ. ದಿನಕ್ಕೆ 45 ರೋಗಿಗಳಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಎಚ್‌ಐವಿ ಸೇರಿದಂತೆ ಕೆಲವು ರೋಗ ಇರುವ ರೋಗಿಗಳ ಡಯಾಲಿಸಿಸ್‌ಗೆ ಪ್ರತ್ಯೇಕ ಡಯಾಲಿಸಿಸ್‌ ಯಂತ್ರ ಇವೆ ಎಂದು ಸ್ಪಷ್ಟಪಡಿಸಿದರು.

----ಬಾಕ್ಸ್‌---

ಕಸ ವಿಲೇವಾರಿ ಸಮಸ್ಯೆ

ಜಿಲ್ಲಾಸ್ಪತ್ರೆ ಆವರಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಆಗಿದೆ. ನಗರಸಭೆ ಸಿಬ್ಬಂದಿ ಕಸ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ಸಿ.ಟಿ.ರವಿ ಅವರಿಗೆ ದೂರಿದರು.

----ಬಾಕ್ಸ್‌--

ಔಷಧಿ ಪೂರೈಸದಷ್ಟು ಸರ್ಕಾರ ದಿವಾಳಿ?

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡದಷ್ಟು ಸರ್ಕಾರ ದಿವಾಳಿಯಾಗಿದೆಯಾ ಎಂದು ಸಿ.ಟಿ.ರವಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ದಿಢೀರ್‌ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗೆ ಬರುವವರು ಅಸಹಾಯಕರು ಮತ್ತು ಬಡವರು. ಇಲ್ಲಿಯೇ ಔಷಧಿ ಇಲ್ಲದಿದ್ದರೆ ಅವರು ಎಲ್ಲಿಂದ ಹಣ ತರಬೇಕು? ರಾಜ್ಯದಾದ್ಯಂತ ಪ್ರತಿ ಸರ್ಕಾರಿ ಆಸ್ಪತ್ರೆ ಗಳಲ್ಲಿ ಔಷಧಿಗಳ ಕೊರತೆ ಕಾಡುತ್ತಿದೆ. ಪರಿಶೀಲನೆ ಮಾಡಿದ 10 ರೋಗಿಗಳ ಪೈಕಿ 6 ರಿಂದ 7 ರೋಗಿಗಳಿಗೆ ಹೊರಗಿನಿಂದ ಔಷಧಿ ತರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ರಾಜ್ಯ ಸರ್ಕಾರಕ್ಕೆ ಆದ್ಯತೆ ಯಾವುದು? ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟದ ಸ್ಥಾನಮಾನ ನೀಡುವುದು ಮೊದಲ ಆದ್ಯತೆಯೋ ಅಥವಾ ಜೀವ ಉಳಿಸಿಕೊಳ್ಳಲು ಬರುವ ಬಡವರಿಗೆ ಚಿಕಿತ್ಸೆ ನೀಡುವುದು ಆದ್ಯತೆಯೋ? ಎಂದು ಟೀಕಿಸಿದರು.

ಡಯಾಲಿಸಿಸ್ ಘಟಕದ ಟೆಂಡರ್ ಪಡೆದ ಖಾಸಗಿ ಕಂಪನಿಗೆ ಕಳೆದ 10 ತಿಂಗಳಿನಿಂದ ಸರ್ಕಾರ ಒಂದು ರು. ಹಣ ನೀಡಿಲ್ಲ. ಇದರಿಂದ ರೋಗಿಗಳಿಗೆ ಚಿಕಿತ್ಸೆ ಸಿಗದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಔಷಧಿಗಳ ಸರಬರಾಜು ಸಂಬಂಧ ಸರ್ಕಾರ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಬಡ ರೋಗಿಗಳಿಗೆ ಅಗತ್ಯವಿರುವ ಔಷಧಿ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು, ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಆಸ್ಪತ್ರೆ ರೋಗಿಗಳಿಗೆ ಊಟ ಪೂರೈಕೆ ಮಾಡುವವರು ಅನುಚಿತವಾಗಿ ನಡೆದುಕೊಳ್ಳಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ಜಿಲ್ಲಾ ಸರ್ಜನ್‌ ಆಸ್ಪತ್ರೆಯಲ್ಲಿರುವ ಸಮಸ್ಯೆ ಬಗ್ಗೆ ಗಮನಕ್ಕೆ ತರಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಸಚಿವರು ಹಾಗೂ ಆಯುಕ್ತರೊಂದಿಗೆ ಮಾತನಾಡಲಾಗುವುದು ಎಂದು ಹೇಳಿದರು.