ಕುಷ್ಟಗಿ ರಸ್ತೆಗೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ನಾಮಕರಣ ಕಾರ್ಯಕ್ರಮ
ನಾನಾ ಕಾರಣಗಳಿಂದ ನಿಗದಿಯಾಗಿದ್ದ ಕಾರ್ಯಕ್ರಮ ಮುಂದೂಡಲಾಗಿದೆ. ಆದರೆ, ಕುಷ್ಟಗಿ ಮೇಲ್ಸೇತುವೆಗೆ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಿಯೇ ಮಾಡುತ್ತೇವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಕುಷ್ಟಗಿ ರಸ್ತೆಗೆ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ನಾಮಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕುಷ್ಟಗಿ ಮೇಲ್ಸೇತುವೆಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಲು ನಿರ್ಧಾರವಾಗಿದ್ದು, ಕೊನೆಗಳಿಗೆಯಲ್ಲಿ ರದ್ದಾಗಿದೆ. ಆದರೆ, ಮುಂದೆಯಾದರೂ ನಾಮಕರಣ ಮಾಡಿಯೇ ಮಾಡುತ್ತೇವೆ. ಈಗ ಸದ್ಯ ಕುಷ್ಟಗಿ ರಸ್ತೆಗೆ ನಗರಸಭೆಯ ಠರಾವಿನಂತೆ ವೀರರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಿದ್ದು ಸಂತೋಷವಾಗಿದೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೊಪ್ಪಳದ ಇತಿಹಾಸದಲ್ಲಿಯೇ ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೆಸರನ್ನು ಕುಷ್ಟಗಿ ರಸ್ತೆಗೆ ನಾಮಕರಣ ಮಾಡಿರುವುದು ಖುಷಿಯಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಕೃಷ್ಣಾರಡ್ಡಿ ಗಲಬಿ ಸ್ವಾಗತಿಸಿದರು.ಎಸ್.ಬಿ. ನಾಗರಳ್ಳಿ, ಮುತ್ತುರಾಜ ಕುಷ್ಟಗಿ, ಗುರುರಾಜ ಹಲಿಗೇರಿ, ಸೋಮನಗೌಡ ಪಾಟೀಲ, ಲತಾ ಗವಿ ಸಿದ್ದಪ್ಪ ಚಿನ್ನೂರು, ರಾಜಶೇಖರ ಆಡೂರು, ಕೃಷ್ಣ ಇಟ್ಟಂಗಿ, ಅಜೀಮ ಅತ್ತಾರ, ತೋಟಪ್ಪ ಕಾಮನವರು, ರಾಮಣ್ಣ ಕಲ್ಲಣ್ಣವರ, ಅಮರೇಶ ಕರಡಿ, ಕರಿಯಪ್ಪ ಮೇಟಿ ಇದ್ದರು.ಕುಷ್ಟಗಿ ಮೇಲ್ಸೇತುವೆ ಉದ್ಘಾಟನೆಗಾಗಿ ಹೈಡ್ರಾಮಾ:
ಕುಷ್ಟಗಿ ರೈಲ್ವೆ ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಲು ಸಂಸದ ರಾಜಶೇಖರ ಹಿಟ್ನಾಳ ಮುಂದಾಗಿದ್ದರು. ರೈಲ್ವೆ ಇಲಾಖೆಯ ಸಹಮತ ಪಡೆಯದೇ ಕಾರ್ಯಕ್ರಮ ನಿಗದಿ ಮಾಡಲಾಯಿತು. ಇದು ತಡರಾತ್ರಿ ಖುದ್ದು ರೈಲ್ವೆ ಸಚಿವರೇ ಮಧ್ಯೆ ಪ್ರವೇಶ ಮಾಡಿ, ಕಾರ್ಯಕ್ರಮ ಮುಂದೂಡಿ, ಮುಂದಿನ ದಿನಗಳಲ್ಲಿ ನಾನೇ ಆಗಮಿಸಿ, ಉದ್ಘಾಟಿಸುತ್ತೇನೆ ಎಂದಿದ್ದರಿಂದ ನಿಗದಿತ ಕಾರ್ಯಕ್ರಮ ರದ್ದಾಯಿತು. ಹೀಗಾಗಿ, ತಡರಾತ್ರಿಯಲ್ಲಿ ರೈಲ್ವೆ ಇಲಾಖೆ ಕುಷ್ಟಗಿ ರೈಲ್ವೆ ಸೇತುವೆಯನ್ನು ಸಂಚಾರ ಬ್ಯಾರಿಕೇಡ್ ಹಾಕಿ, ರೈಲ್ವೆ ಪೊಲೀಸ್ ರನ್ನು ಹಾಕಿ, ಬಂದ್ ಮಾಡಿಸಿದರು. ಇದು ಭಾರಿ ಹೈಡ್ರಾಮಾಗೆ ಸಾಕ್ಷಿಯಾಯಿತು. ತಕ್ಷಣ ರೈಲ್ವೆ ಸೇತುವೆ ಉದ್ಘಾಟನೆಯನ್ನೇ ಕೈಬಿಡಲಾಯಿತು.