ಕನ್ನಡಪರಭ ವಾರ್ತೆ ಗುಬ್ಬಿ
ವೀರಣ್ಣ ಅವರು ರಂಗಭೂಮಿಗೆ ಅಪಾರವಾದ ಕೊಡುಗೆಯನ್ನು ನೀಡಿರುವುದರಿಂದಲೇ ಇಂದಿಗೂ ಜನಮಾಸದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದು ರಂಗನಿರ್ದೇಶಕ ಹಾಗೂ ಪ್ರಾಧ್ಯಾಪಕ ರಾಜಪ್ಪ ದಳವಾಯಿ ತಿಳಿಸಿದರು.ಗುರುವಾರ ಸಂಜೆ ಪಟ್ಟಣದ ಗುಬ್ಬಿವೀರಣ್ಣ ರಂಗಮಂದಿರದಲ್ಲಿ ಗುಬ್ಬಿ ವೀರಣ್ಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಜೀವಿತ ನಾಟಕೋತ್ಸವ ಹಾಗೂ ಹಿರಿಯ ರಂಗಕರ್ಮಿ ಗುಬ್ಬಿ ಚನ್ನಬಸವಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೀರಣ್ಣನವರಿಂದಾಗಿಯೇ ವಿಶ್ವ ರಂಗಭೂಮಿಯಲ್ಲಿ ಗುಬ್ಬಿಯು ಪ್ರಖ್ಯಾತಿಯನ್ನು ಗಳಿಸಲು ಸಾಧ್ಯವಾಗಿದೆ. ವೀರಣ್ಣನವರು ಕಂಪನಿಯನ್ನು ಕಟ್ಟಿ ಕೇವಲ ನಾಟಕ ಪ್ರದರ್ಶನಕ್ಕೆ ಸೀಮಿತರಾಗದೆ, ಶ್ರೇಷ್ಠ ಕಲಾವಿದರನ್ನು ಈ ನಾಡಿಗೆ ಪರಿಚಯಿಸಿದರು ಎಂದು ಹೇಳಿದರು.ಗುಬ್ಬಿ ಕಂಪನಿಯಲ್ಲಿ ಬಳಸುತ್ತಿದ್ದ ಪರಿಕರಗಳನ್ನು ಸಂಗ್ರಹಿಸಿ ವಸ್ತುಸಂಗ್ರಹಾಲಯ ವನ್ನಾಗಿಸಿದರೆ ಇಂದಿನ ಪೀಳಿಗೆಗೆ ಅನುಕೂಲವಾಗುವುದು. ರಂಗ ಚಟುವಟಿಕೆಗಳು ನಿರಂತರವಾಗಿದ್ದಾಗ ಮಾತ್ರ ಜನರಲ್ಲಿ ಆಸಕ್ತಿ ಮೂಡಿಸಲು ಸಾಧ್ಯವಾಗುವುದು. ಆದ್ದರಿಂದ ಟ್ರಸ್ಟ್ ನವರು ವಾರಕ್ಕೊಮ್ಮೆಯಾದರೂ ನಾಟಕ ಪ್ರದರ್ಶನ ಆಯೋಜಿಸುವಂತೆ ಸಲಹೆ ನೀಡಿದರು.
ಟ್ರಸ್ಟಿ ಲಕ್ಷ್ಮಣದಾಸ್ ಮಾತನಾಡಿ, ಕೋವಿಡ್ ಕಾರಣದಿಂದ ಹಿಂದಿನ ವರ್ಷಗಳಲ್ಲಿ ರಂಗ ಚಟುವಟಿಕೆಗಳು ಹಿನ್ನಡೆಗೊಂಡಿದ್ದವು. ಇನ್ನು ಮುಂದೆ ಟ್ರಸ್ಟ್ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ನಿರಂತರವಾಗಿ ಕಾರ್ಯಕ್ರಮಗಳನ್ನು ಅಯೋಜನೆ ಮಾಡುವ ಮೂಲಕ ರಂಗಭೂಮಿಗೆ ಹೊಸ ಚೈತನ್ಯವನ್ನು ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಂಗಕರ್ಮಿ ಚನ್ನಬಸವಯ್ಯ, ಆಧುನಿಕತೆ ಬೆಳೆದಂತೆ ನಾಟಕಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ದುರದೃಷ್ಟಕರ. ಈ ಹಿಂದೆ ನಾಟಕ ಕಂಪನಿಯವರೇ ಊರುಗಳಿಗೆ ತೆರಳಿ ಪ್ರದರ್ಶನ ನೀಡುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿತ್ತು. ಆದರೆ ಇಂದು ಅವೆಲ್ಲವೂ ಕೇವಲ ನೆನಪುಗಳಾಗಿವೆ. ಈ ನಿಟ್ಟಿನಲ್ಲಿ ರಂಗಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಚಕ್ರಪಾಣಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ್, ಜೀವಿತ ನಾಟಕೋತ್ಸವದ ಸಂಚಾಲಕ ರಂಗಯ್ಯ, ಗುಬ್ಬಿ ವೀರಣ್ಣ ಟ್ರಸ್ಟ್ ನ ರಾಜೇಶ್ ಹಾಗೂ ರಂಗಾಸಕ್ತರು ಭಾಗವಹಿಸಿದ್ದರು.