3 ಎಕರೆ ಪ್ರದೇಶದಲ್ಲಿ ಸಸ್ಯ ಸಂಪತ್ತು ಬೆಳೆಸಿದ ಶಿಕ್ಷಕ

KannadaprabhaNewsNetwork |  
Published : Jun 18, 2024, 12:52 AM IST
ಗುಡದಪ್ಪ ಲಿಂಗಶೆಟ್ಟರ ಜಮೀನಿನಲ್ಲಿ ಬೆಳಿಸಿದ ಅರಣ್ಯ.  | Kannada Prabha

ಸಾರಾಂಶ

ಮುಂಡರಗಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಶಿಕ್ಷಕ, ಮುಂಡರಗಿ ತಾಲೂಕಿನ ಬೂದಿಹಾಳ ಗ್ರಾಮದ ಗುಡದಪ್ಪ ಲಿಂಗಶೆಟ್ಟರ ಅವರು ತಮ್ಮ 3 ಎಕರೆ ಜಾಗದಲ್ಲಿ ಅರಣ್ಯ ಬೆಳೆಸಿದ್ದಾರೆ.

ಶರಣು ಸೊಲಗಿ

ಮುಂಡರಗಿ: ತಾಲೂಕಿನ ಬೂದಿಹಾಳ ಗ್ರಾಮದ ಗುಡದಪ್ಪ ಲಿಂಗಶೆಟ್ಟರ ಅವರು ತಮ್ಮ 3 ಎಕರೆ ಜಾಗದಲ್ಲಿ ಅನೇಕ ತರಹದ ಗಿಡಗಳನ್ನು ಬೆಳೆಸಿ, ನಿಜವಾದ ಪರಿಸರ ಕಾಳಜಿ ತೋರಿದ್ದಾರೆ.

ಮುಂಡರಗಿಯ ಅನುದಾನರಹಿತ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಗುಡದಪ್ಪ 15 ವರ್ಷಗಳ ಹಿಂದೆ ತಮ್ಮ ಹೊಲದಲ್ಲಿ 300ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದರು. ಪ್ರಾರಂಭದಲ್ಲಿ 1 ಕಿಮೀ ದೂರದಿಂದ ನೀರು ಹೊತ್ತು ತಂದು ಅವುಗಳಿಗೆ ಹಾಕಿ ಕಾಳಜಿಯಿಂದ ಬೆಳೆಸಿದ್ದಾರೆ. ಅದರ ಪರಿಣಾಮ ಈಗ ಕಾಣಬಹುದು. ಎಲ್ಲ ಮರ-ಗಿಡಗಳು ಹಸಿರಿನಿಂದ ಕಂಗೊ‍ಸುತ್ತಿವೆ. 110 ಬೇವಿನ ಗಿಡ, 63 ಹುಣಸೆ ಗಿಡ, 27 ನೀಲಗಿರಿ, 27 ಮಾವಿನ ಗಿಡ, 24 ಚಿಕ್ಕು, 22 ಸೀತಾಫಲ, 3 ನೇರಲೆ, 1 ಬಳೂಲ, 9 ಅಕೇಶಿಯಾ ಗಿಡಗಳನ್ನು ಬೆಳೆಸಿದ್ದಾರೆ.

ಜಮೀನಿನ ಅಲ್ಲಲ್ಲಿ ಬಿಲ್ವ, ಪೇರಲ, ಕರಿಬೇವು, ದಾಳಿಂಬೆ, ನುಗ್ಗೆ, ಸಿಸಂ, ಬನ್ನಿ, ಬೆಟ್ಟದ ನೆಲ್ಲಿ ಗಿಡಗಳನ್ನೂ ಬೆಳೆಸಿದ್ದಾರೆ. 20 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಬೈಫ್ ಸಂಸ್ಥೆ ಕೆಲಸ ಮಾಡುತ್ತಿತ್ತು. ಈ ಸಂಸ್ಥೆಯ ಅಧಿಕಾರಿಗಳ ಪರಿಸರ ಜಾಗೃತಿಯ ಮಾತುಗಳಿಂದ ಪ್ರಭಾವಿತರಾಗಿ ಗುಡದಪ್ಪ ಲಿಂಗಶೆಟ್ಟರ ಅವರು ಚಿಕ್ಕ ಸಸಿಗಳನ್ನು ತಂದು ತಮ್ಮ ಗ್ರಾಮದಲ್ಲಿ ಅಲ್ಲಲ್ಲಿ ಹಚ್ಚಿ ಬೆಳೆಸುತ್ತಿದ್ದರು.

ಆನಂತರದಲ್ಲಿ ತಮ್ಮ ಮನೆಯವರ ಅನುಮತಿ ಪಡೆದು ತಮ್ಮದೇ ಜಮೀನಿನಲ್ಲಿ ಸಸಿಗಳನ್ನು ತಂದು ನೆಟ್ಟರು. ಮಳೆ ಇಲ್ಲದ ವೇಳೆಯಲ್ಲಿ ಬೇರೆಡೆಯಿಂದ ಕೊಡದಲ್ಲಿ ಹೊತ್ತುತಂದು ನೀರು ಹಾಕಿ ಅವುಗಳನ್ನು ಬದುಕಿಸಿದರು. ಇನ್ನು ಕೆಲವೆಡೆ ಬೀಜಗಳನ್ನೇ ನೇರವಾಗಿ ಬಿತ್ತಿ ಗಿಡ-ಮರ ತಯಾರು ಮಾಡಿದ್ದಾರೆ.

ಗಿಡಗಳ ರಕ್ಷಣೆಗೆ ಅವರು ತಂತಿಬೇಲಿ ಹಾಕಿಲ್ಲ. ಮೂರು ಎಕರೆ ಜಮೀನಿನ ಸುತ್ತಲೂ ಸೀಮೆತಂಗಡಿ, ಗೊಬ್ಬರಗಿಡಗಳು ಹಾಗೂ ಅಲ್ಲಲ್ಲಿ ನುಗ್ಗೆ ಗಿಡಗಳನ್ನು ಬೆಳೆಸಿದ್ದಾರೆ. ಆ ಮೂಲಕ ಹಸಿರು, ನೈಸರ್ಗಿಕ ಬೇಲಿ ನಿರ್ಮಿಸಿದ್ದಾರೆ. ಹೊಲದಲ್ಲಿ ಕೃಷಿಹೊಂಡ ನಿರ್ಮಿಸಿ ಆ ನೀರನ್ನೇ ಗಿಡಗಳಿಗೆ ಹಾಕುತ್ತಾರೆ. ಶಾಲೆ ಮುಗಿದ ಆನಂತರ ತಮ್ಮ ಜಮೀನಿನಲ್ಲಿ ಗಿಡಗಳ ರಕ್ಷಣೆ ಮಾಡುತ್ತ ಕಾಲ ಕಳೆಯುತ್ತಾರೆ. ಜಾನುವಾರುಗಳಿಗೆ ಆಹಾರವಾಗಿ ಸುಬಾಬುಲ್ ಬೆಳೆಸಿದ್ದಾರೆ.

ಹೊಲದಲ್ಲಿ ನೀರು ನಿಲ್ಲಲು ಅನೇಕ ಚಿಕ್ಕ ಚಿಕ್ಕ ಕಾಲುವೆಗಳನ್ನು ನಿರ್ಮಿಸಿದ್ದಾರೆ. ಜತೆಗೆ ಕಲ್ಲಿನ ಅಡತಡೆಗಳನ್ನು ಮಾಡಿ ನೀರು ನಿಲ್ಲುವಂತೆ ಮಾಡಿದ್ದಾರೆ. ಇವೆಲ್ಲದರ ಕಾಳಜಿಯಿಂದ ಹೊಲದಲ್ಲಿ ಬಿದ್ದ ನೀರು ಅಲ್ಲಿಯೇ ಇಂಗಿ ಗಿಡ-ಮರಗಳಿಗೆ ಅನುಕೂಲವಾಗುತ್ತಿದೆ. ರೈತರು ತಮಗಿರುವ ಜಮೀನುಗಳಲ್ಲಿ ಕೆಲವು ಗಿಡಮರಗಳನ್ನು ಬೆಳೆಸಿದರೆ ಅವು ಆಮ್ಲಜನಕದ ಕೇಂದ್ರಗಳಾಗಿ, ಪರಿಸರವನ್ನು ಸ್ವಚ್ಛಗೊಳಿಸಿ ತಾಪಮಾನ ಹತೋಟಿಗೆ ತರುವಲ್ಲಿ ಸಹಾಯಕವಾಗುತ್ತವೆ.ಬೈಫ್ ಸಂಸ್ಥೆಯವರು ನನ್ನಲ್ಲಿ ಗಿಡ-ಮರಗಳನ್ನು ಬೆಳೆಸುವ ಹುಚ್ಚು ಹಿಡಿಸಿದರು. ಪರಿಸರ ಸಂರಕ್ಷಣೆಗೆ ಗಿಡ-ಮರಗಳ ಪಾತ್ರ ಬಹುಮುಖ್ಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಬೆಳೆಸಲು ಎಲ್ಲರೂ ಮುಂದಾಗಬೇಕು. ಶುದ್ಧ ಗಾಳಿ, ಉತ್ತಮ ಪರಿಸರಕ್ಕಾಗಿ ರೈತರಾದ ನಾವು ನಮ್ಮ ಜಮೀನಿನಲ್ಲಿ ಒಂದಿಷ್ಟು ಗಿಡ-ಮರಗಳನ್ನು ಬೆಳೆಸಿದರೆ ನಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಶಿಕ್ಷಕ ಗುಡದಪ್ಪ ಲಿಂಗಶೆಟ್ಟರ ಹೇಳುತ್ತಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''