ಸರ್ಕಾರಿ ಐಟಿಐ ಕೇಂದ್ರಕ್ಕೆ ಶಾಸಕರಿಂದ ಗುದ್ದಲಿ ಪೂಜೆ

KannadaprabhaNewsNetwork | Published : Feb 1, 2024 2:02 AM

ಸಾರಾಂಶ

ಮಾಲೂರು ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನದಡಿ ಗ್ರಾಮಾಂತರ ಪ್ರದೇಶಗಳಿಗೆ ೨೫ ಕೋಟಿ ಬಿಡುಗಡೆಯಾಗಿ ಇದು ಮುಖ್ಯ ರಸ್ತೆಯಿಂದ ಗ್ರಾಮೀಣ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈಗಾಗಲೇ ೬೦ ಕಿಮೀ ಗಿಂತ ಹೆಚ್ಚಾಗಿ ಕಾಮಗಾರಿ ನಡೆಯುತ್ತಿದೆ, ೯೯ ರಾಜ್ಯ ಹೆದ್ದಾರಿ ಕೋಲಾರ ತಾಲೂಕಿನ ಗಡಿಯಂಚಿನ ಪಾರ್ಶ್ವಗಾನಹಳ್ಳಿ ಕ್ರಾಸ್‌ನಿಂದ ಟೇಕಲ್ ತೊರಲಕ್ಕಿ ಮಾರ್ಗವಾಗಿ ತಮಿಳುನಾಡು ಗಡಿವರೆಗೆ ಒಟ್ಟು ೩೦ ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಾರಂಭಗೊಳ್ಳುತ್ತದೆ.

ಮುಂದಿನ ಶೈಕ್ಷಣಿಕ ಬಜೆಟ್ ನಲ್ಲಿ ಡಿಪ್ಲೋಮೊ ಕಾಲೇಜು ಸ್ಥಾಪನೆ । ಶಾಸಕ ನಂಜೇಗೌಡ

ಕನ್ನಡಪ್ರಭ ವಾರ್ತೆ ಟೇಕಲ್

ಸಮೀಪದ ಕೆ.ಜಿ.ಹಳ್ಳಿ ಸ ನಂ ೭೩ರ ಗೋಮಾಳದಲ್ಲಿ ೨ ಎಕರೆ ಪ್ರದೇಶದಲ್ಲಿ ಡಿಪ್ಲೋಮೊ ಕಾಲೇಜು ಸ್ಥಾಪನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪ್ರಸ್ಥಾವನೆ ಸಲ್ಲಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದ ಬಜೆಟ್‌ನಲ್ಲಿ ಮಂಜೂರು ಮಾಡುವುದಾಗಿ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಟೇಕಲ್‌ನ ಕೆ.ಜಿ.ಹಳ್ಳಿ ಬೈಪಾಸ್ ಪಕ್ಕದಲ್ಲಿ ೨ ಎಕರೆ ಪ್ರದೇಶದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಐಟಿಐ ಕಾಲೇಜು ಸ್ಥಾಪನೆಗೆ ೩ ಕೋಟಿ ೮೦ ಲಕ್ಷ ರು. ಮಂಜೂರಾಗಿದ್ದು, ಗುತ್ತಿಗೆದಾರರು ಹೇಳುವ ಪ್ರಕಾರ ೮ ತಿಂಗಳಲ್ಲಿ ಉತ್ತಮ ಸುಸಜ್ಜಿತ ಐಟಿಐ ಕಾಲೇಜು ನಿರ್ಮಾಣಗೊಳ್ಳುತ್ತದೆ ಎಂದರು.

ಕ್ಷೇತ್ರದಲ್ಲಿ ನನ್ನ ಸತತ ಪರಿಶ್ರಮದಿಂದ ಹಾಗೂ ಗ್ರಾಮಸ್ಥರ ಸಹಕಾರದಿಂದ ಕೆ.ಜಿ.ಹಳ್ಳಿ ಸನಂ.೭೩ರ ಗೋಮಾಳದಲ್ಲಿನ ಸುಮಾರು ೩೮ ಎಕರೆ ಪ್ರದೇಶವನ್ನು ವಿವಿಧ ಸರ್ಕಾರಿ ಇಲಾಖೆ ಕಚೇರಿಗಳನ್ನುನಿರ್ಮಿಸಲು ಪಣತೊಟ್ಟಿದ್ದು, ಸರ್ಕಾರಿ ಪದವಿಪೂರ್ವ ಕಾಲೇಜು ೪ ಎಕರೆ ಪ್ರಾಥಮಿಕ ಶಾಲೆಗಳಿಗೆ ೭, ಅಂಬೇಡ್ಕರ್ ಭವನಕ್ಕೆ ೧, ನಾಡಕಚೇರಿ, ರೈತ ಭವನ, ಕ್ರೀಡಾಂಗಣ, ಐಟಿಐ ಕಾಲೇಜಿಗೆ ಸ್ಥಳ ಹಂಚಿಕೆ ಮಾಡಲಾಗಿದ್ದು, ೪ ಎಕರೆಯಲ್ಲಿ ಬೈಪಾಸ್ ನಿರ್ಮಿಸಿದೆ, ಅದರಂತೆ ನಾಡಕಚೇರಿ, ಕಾಲೇಜು ಉದ್ಘಾಟನೆಗೊಂಡು ಕಾರ್ಯ ನಿರ್ವಹಿಸುತ್ತಿದ್ದು, ಅಂಬೇಡ್ಕರ್ ಭವನ, ರೈತ ಭವನ ಸುಸಜ್ಜಿತ ಕಟ್ಟಡವಾಗಿದೆ ಎಂದು ಹೇಳಿದರು.

ರಸ್ತೆಗಳ ಅಭಿವೃದ್ಧಿ:

ಮಾಲೂರು ತಾಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನದಡಿ ಗ್ರಾಮಾಂತರ ಪ್ರದೇಶಗಳಿಗೆ ೨೫ ಕೋಟಿ ಬಿಡುಗಡೆಯಾಗಿ ಇದು ಮುಖ್ಯ ರಸ್ತೆಯಿಂದ ಗ್ರಾಮೀಣ ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈಗಾಗಲೇ ೬೦ ಕಿಮೀ ಗಿಂತ ಹೆಚ್ಚಾಗಿ ಕಾಮಗಾರಿ ನಡೆಯುತ್ತಿದೆ, ೯೯ ರಾಜ್ಯ ಹೆದ್ದಾರಿ ಕೋಲಾರ ತಾಲೂಕಿನ ಗಡಿಯಂಚಿನ ಪಾರ್ಶ್ವಗಾನಹಳ್ಳಿ ಕ್ರಾಸ್‌ನಿಂದ ಟೇಕಲ್ ತೊರಲಕ್ಕಿ ಮಾರ್ಗವಾಗಿ ತಮಿಳುನಾಡು ಗಡಿವರೆಗೆ ಒಟ್ಟು ೩೦ ಕೋಟಿ ಅನುದಾನದಲ್ಲಿ ಕಾಮಗಾರಿ ಪ್ರಾರಂಭಗೊಳ್ಳುತ್ತದೆ.

ಮಾಲೂರಿನಿಂದ ಟೇಕಲ್ ಮಧ್ಯೆ ಕುಂತೂರು ಗ್ರಾಮದಲ್ಲಿ ೧ ಕಿಮೀ ರಸ್ತೆ ಹದಗೆಟ್ಟಿದ್ದು, ಅದನ್ನು ಡಾಂಬರೀಕರಣ ಮಾಡಲಾಗುತ್ತಿದೆ, ಬನಹಳ್ಳಿಯಿಂದ ನೆಲ್ಲಹಳ್ಳಿ ಸಂಪರ್ಕ ರಸ್ತೆಯಾಗಿದ್ದು, ಮಾಕಾರಹಳ್ಳಿಯಿಂದ ಕ್ಷೇತ್ರನಹಳ್ಳಿ, ದೊಡ್ಡಿ ರಸ್ತೆ, ಜಯಮಂಗಲ, ಚಿಕ್ಕತಿರುಪತಿ, ಲಕ್ಕೂರು, ದೊಮ್ಮಲೂರು, ರಸ್ತೆಗಳ ಅಭಿವೃದ್ಧಿ ನಡೆಯುತ್ತಿದೆ ಎಂದರು.

ಬಿ.ಜೆ.ಪಿಗೆ ಟಾಂಗ್ ನೀಡಿದ ಶಾಸಕ:

ಕಾಂಗ್ರೆಸ್‌ನ ೫ ಗ್ಯಾರಂಟಿಗಳನ್ನು ಸಾಮಾನ್ಯ ಬಡವರಿಗೆ ನೀಡಲಾಗಿದ್ದು, ನಾವು ಚುನಾವಣೆಯಲ್ಲಿ ಘೋಷಿಸಿದಂತೆ ಸಾಮಾನ್ಯ ಜನರಿಗೆ ಅನ್ನ ಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಯುವ ನಿಧಿಯೋಜನೆಗಳನ್ನು ನೀಡಿದ್ದು, ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಯಾವುದೇ ಯೋಜನೆಗಳು ನೀಡಿಲ್ಲ. ಬಿಜೆಪಿಯವರಿಗೆ ನಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡುವ ಹಕ್ಕಿಲ್ಲವೆಂದು ಟಾಂಗ್ ನೀಡಿದರು.

ಶಾಸಕರಿಗೆ ಮನವಿ:

ಐಟಿಐ ವ್ಯಾಸಂಗ ಮಾಡಿ ಉತ್ತೀರ್ಣರಾದ ನಿರುದ್ಯೋಗಿ ಐಟಿಐ ವಿದ್ಯಾರ್ಥಿಗಳಿಗೆ ಯುವ ನಿಧಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಕೆಜಿ ಹಳ್ಳಿ ಗ್ರಾಪಂ ಅಧ್ಯಕ್ಷ ಎಸ್.ಆರ್.ಯಲ್ಲಪ್ಪ, ಉಪಾಧ್ಯಕ್ಷೆ ಮಮತಾ ಶಶಿಧರ್, ಬಗರ್ ಹುಕ್ಕುಂ ಅಧ್ಯಕ್ಷ ಆನೇಪುರ ಹನುಮಂತಪ್ಪ, ಸದಸ್ಯ ಜಿ.ಸತೀಶ್‌ಬಾಬು, ಮುಖಂಡರಾದ ಕೆ.ಎಸ್.ವೆಂಕಟೇಶ್‌ಗೌಡ, ಎಸ್.ಜಿ.ರಾಮಮೂರ್ತಿ, ಪ್ರಗತಿ ಶ್ರೀನಿವಾಸ್, ಗೋವಿಂದರಾಜ ರೆಡ್ಡಿ, ಎ.ಕೆ.ವೆಂಕಟೇಶ್, ಮಮತಾ ರೆಡ್ಡಿ, ಮುನಿಶಾಮಿಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ವಿನೋದ್‌ಗೌಡ, ಟೇಕಲ್ ಗ್ರಾಪಂ ಅಧ್ಯಕ್ಷ ಸಂದೀಪ್, ಬ್ಲಾಕ್ ಕಾಂಗ್ರೆಸ್‌ನ ಮಧುಸೂಧನ್, ವಿಜಯನರಸಿಂಹ, ಮುರುಗೇಶ್, ಡಿ.ಕೆ.ಕೃಷ್ಣಮೂರ್ತಿ, ತಿಮ್ಮರಾಯಪ್ಪ, ಮಂಜುನಾಥ್, ದಿನ್ನಹಳ್ಳಿ ರಮೇಶ್, ಸೊಸೈಟಿ ಅಧ್ಯಕ್ಷ ರವೀಂದ್ರ, ಕಾಕಪ್ಪ, ಗುತ್ತಿಗೆದಾರ ಪ್ರತಾಪ್, ಲೋಕೋಪಯೋಗಿ ಇಲಾಖೆಯ ಎಇಇ ರಾಜು, ಇಂಜಿನಿಯರ್‌ಗಳಾದ ರಾಜಗೋಪಾಲ್, ವೆಂಕಟರಾಮ್, ಐಟಿಐ ಪ್ರಾಂಶುಪಾಲ ವೆಂಕಟೇಶ್‌ಮೂರ್ತಿ ಇದ್ದರು.

--------

Share this article