ಗುಡೇಕೋಟೆ ಉತ್ಸವಕ್ಕೆ ವೈಭವದ ತೆರೆ

KannadaprabhaNewsNetwork | Published : Feb 26, 2024 1:31 AM

ಸಾರಾಂಶ

ಮುಂದಿನ ವರ್ಷಗಳಲ್ಲಿ ಈ ಉತ್ಸವ ಜನರ ಉತ್ಸವವಾಗಿಸಲು ಶ್ರಮಿಸಲಾಗುವುದು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭರವಸೆ ನೀಡಿದರು.

ಕೂಡ್ಲಿಗಿ: ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ, ಆದರ್ಶಗಳೇ ಸ್ಫೂರ್ತಿಯಾಗಿದ್ದು, ತಾಲೂಕಿನ ಮನೆಮಗಳಾದ ಒನಕೆ ಓಬವ್ವನ ಸ್ಮರಣೆ, ಪಾಳೇಗಾರರ ಆಡಳಿತದ ಗತವೈಭವದ ಮೆಲುಕು ಹಾಕುವಂಥ ಐತಿಹಾಸಿಕ ಗುಡೇಕೋಟೆ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದಿರುವುದು ಅತೀವ ಸಂತಸ ತಂದಿದೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಭಾನುವಾರ ರಾತ್ರಿ ತಾಲೂಕಿನ ಗುಡೇಕೋಟೆಯಲ್ಲಿ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿದ ಗುಡೇಕೋಟೆ ಉತ್ಸವ ಸಮಾರೋಪದಲ್ಲಿ ಮಾತನಾಡಿದ ಅವರು, ಇಂಥ ಅರ್ಥಪೂರ್ಣ ಉತ್ಸವ ಆಚರಣೆಗೆ ರಾಜ್ಯ ಸರ್ಕಾರ ₹೩೦ ಲಕ್ಷ ನೀಡುವ ಮೂಲಕ ಪ್ರೋತ್ಸಾಹಿಸಿದೆ. ಮುಂದಿನ ವರ್ಷಗಳಲ್ಲಿ ಈ ಉತ್ಸವ ಜನರ ಉತ್ಸವವಾಗಿಸಲು ಶ್ರಮಿಸಲಾಗುವುದು. ಒನಕೆ ಓಬವ್ವನ ವಂಶಸ್ಥರು ಹಾಗೂ ಜರಿಮಲೆ ರಾಜವಂಶಸ್ಥರಿಗೆ ಸರ್ಕಾರದಿಂದ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.

ಚಿತ್ತರಗಿಯ ಬಸವಲಿಂಗ ಸ್ವಾಮೀಜಿ ಮಾತನಾಡಿ, ಕೂಡ್ಲಿಗಿ ಮತ್ತು ಮೊಳಕಾಲ್ಮುರು ತಾಲೂಕುಗಳು ಹಿಂದುಳಿದಿವೆ. ಹಾಗಾಗಿ ಶಿಕ್ಷಣದ ಮೂಲಕ ಅಭಿವೃದ್ಧಿಯತ್ತ ಸಾಗಬೇಕು. ಪ್ರಾಮಾಣಿಕ ಸೇವೆಯ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮನಂತೆ ಮಕ್ಕಳನ್ನು ಬೆಳೆಸಬೇಕಿದೆ. ಕೂಡ್ಲಿಗಿ ಕ್ಷೇತ್ರದ ಶಾಸಕರ ಶಕ್ತಿ, ಅವಿರತ ಶ್ರಮ ಮತ್ತು ಬದ್ಧತೆಯೇ ಗುಡೇಕೋಟೆ ಉತ್ಸವ ಸಾಕಾರಗೊಂಡಿರುವುದು ಸಂತಸ ತಂದಿದೆ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಮಾತಾ ಮಂಜಮ್ಮ ಜೋಗತಿ ಮಾತನಾಡಿ, ಗುಡೇಕೋಟೆ ಉತ್ಸವವು ಹಂಪಿ ಉತ್ಸವದ ಮಾದರಿಯಲ್ಲಿ ನಡೆದಿದೆ. ಸಮಾಜದ ಒಳಿತು ಬಯಸುವವರು, ತಂದೆ- ತಾಯಿಗಳ ಸೇವೆ ಮಾಡವವರಿಗೆ ಒಳ್ಳೆಯದೇ ಆಗಲಿದೆ. ಪುಸ್ತಕ, ಪತ್ರಿಕೆಗಳನ್ನು ಓದುವ ಸಂಸ್ಕೃತಿ ಬೆಳೆಸಿ, ಮೊಬೈಲ್ ಹವ್ಯಾಸ ತ್ಯಜಿಸುವುದು ಎಲ್ಲರ ಜವಾಬ್ದಾರಿ. ಸಂಸ್ಕಾರವಂತ ಕುಟುಂಬದಲ್ಲಿ ಜನಿಸಿದ ಡಾ. ಎನ್.ಟಿ. ಶ್ರೀನಿವಾಸ್ ಅವರು ನ್ಯಾಯದ ಮಾರ್ಗದಲ್ಲಿ ನಡೆಯುತ್ತಿದ್ದು, ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ. ಒನಕೆ ಓಬವ್ವನ ಇತಿಹಾಸ ಪ್ರಜ್ವಲಿಸುವಂತೆ ಮಾಡಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷ ಎನ್. ಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ ರಂಗಣ್ಣವರ ಮಾತನಾಡಿದರು. ತಹಸೀಲ್ದಾರ್ ರಾಜು ಪಿರಂಗಿ, ತಾಪಂ ಇಒ ವೈ. ರವಿಕುಮಾರ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಗುಡೇಕೋಟೆ ರಾಜವಂಶಸ್ಥ ಶಿವರಾಜ ವರ್ಮ, ಜರಿಮಲೆ ರಾಜವಂಶಸ್ಥ ಕೃಷ್ಣರಾಜ ವರ್ಮ, ಮುಖಂಡರಾದ ಎನ್.ಟಿ. ತಮ್ಮಣ್ಣ, ಗುಂಡುಮುಣುಗು ಎಸ್.ಪಿ. ಪ್ರಕಾಶ್, ನಾಗರಕಟ್ಟೆ ರಾಜೇಂದ್ರ ಪ್ರಸಾದ್, ದಿನ್ನೆ ಮಲ್ಲಿಕಾರ್ಜುನ, ಶಿವಪ್ರಸಾದ ಗೌಡ, ಕೆ.ಎಂ. ಶಶಿಧರ, ನಿವೃತ್ತ ಇಒ ಜಿ.ಎಂ. ಬಸಣ್ಣ, ಕೆಇಬಿ ಗೋವಿಂದ, ಹಿರೇಕುಂಬಳಗುಂಟೆ ಉಮೇಶ್, ಹುಬ್ಬಳ್ಳಿ ನರಸಿಂಹನಗಿರಿ ವೆಂಕಟೇಶ್, ಮಡಿವಾಳ ಮಾರೇಶ್, ಎನ್.ವಿ. ತಮ್ಮಣ್ಣ, ಹಾರಕಬಾವಿ ಮಹಾಲಿಂಗಪ್ಪ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಮರಬನಹಳ್ಳಿ ಮಾರಪ್ಪ, ಕಾನಹೊಸಹಳ್ಳಿ ಗ್ರಾಪಂ ಅಧ್ಯಕ್ಷ ಎ.ಸಿ. ಚೇತನ್, ಕರವೇ ಹೋಬಳಿ ಅಧ್ಯಕ್ಷ ಶಿವಕುಮಾರ, ಸಿಪಿಐ ಸುರೇಶ್ ತಳವಾರ ಸೇರಿ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಸುರಪುರ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಮೌನಾಚರಿಸಲಾಯಿತು.

Share this article