ಗುಡಿಸಾಗರ: ಕಲುಷಿತ ನೀರು ಸೇವಿಸಿ ಮತ್ತೆ 59 ಜನ ಅಸ್ವಸ್ಥ

KannadaprabhaNewsNetwork |  
Published : Sep 12, 2025, 01:00 AM IST
11ಎಚ್‌ಯುಬಿ31ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿರುವುದು. | Kannada Prabha

ಸಾರಾಂಶ

ಗ್ರಾಮದಲ್ಲಿ ನಿರ್ಮಿಸಿದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಗ್ರಾಮಸ್ಥರ ನಿರಂತರ ಆರೋಗ್ಯ ತಪಾಸಣೆ ನಡೆದಿದ್ದು, ಎರಡು ದಿನಗಳಲ್ಲಿ ಈ ವರೆಗೆ 340 ಮನೆಗಳನ್ನು ಆಶಾ ಹಾಗೂ ನರ್ಸ್‌ಗಳಿಂದ ಸರ್ವೇ ನಡೆಸಲಾಗಿದೆ.

ನವಲಗುಂದ: ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಸೆ.8 ರಿಂದ ಆರಂಭಗೊಂಡ ಕಲುಷಿತ ನೀರು ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ 59 ಪ್ರಕರಣಗಳು ಬೆಳಕಿಗೆ ಬಂದಿದ್ದು ಗ್ರಾಮದಲ್ಲಿಯೇ ಸ್ಥಾಪಿಸಲಾದ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.

ಇದರಲ್ಲಿ ಐವರನ್ನು ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಹಿಂದೆ ದಾಖಲಾಗಿದ್ದ 26 ಜನರ ಪೈಕಿ ಗುರುವಾರ 11 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಗುರುವಾರ ಗ್ರಾಪಂ ಸಿಬ್ಬಂದಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಹಾಗೂ ಕೆರೆ ಸುತ್ತಲೂ ದನ-ಕರುಗಳು ಹೋಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಭರದಿಂದ ನಡೆಸಿದ್ದು, ಕಳೆದ ಎರಡು ದಿನಗಳಿಂದ ನವಲಗುಂದ ಚೆನ್ನಮ್ಮನ ಜಲಾಶಯದಿಂದ ಶುದ್ಧ ನೀರನ್ನು ಪೂರೈಕೆ ಮಾಡಲಾಗುತ್ತಿದೆ.

ಗ್ರಾಮದಲ್ಲಿ ನಿರ್ಮಿಸಿದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಗ್ರಾಮಸ್ಥರ ನಿರಂತರ ಆರೋಗ್ಯ ತಪಾಸಣೆ ನಡೆದಿದ್ದು, ಎರಡು ದಿನಗಳಲ್ಲಿ ಈ ವರೆಗೆ 340 ಮನೆಗಳನ್ನು ಆಶಾ ಹಾಗೂ ನರ್ಸ್‌ಗಳಿಂದ ಸರ್ವೇ ನಡೆಸಲಾಗಿದೆ. ಈ ವೇಳೆ ಜನರಲ್ಲಿ ಅನಾರೋಗ್ಯ ಕಂಡು ಬಂದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜತೆಗೆ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸೊಪ್ಪಿಮಠ ನೇತೃತ್ವದಲ್ಲಿ ಗ್ರಾಮಸ್ಥರ ತಪಾಸಣೆ ಹಾಗೂ ನೀರಲ್ಲಿರುವ ಲಾರ್ವಾ ಸಮೀಕ್ಷೆ ಕಾರ್ಯ ನಡೆದಿದೆ. ವೈದ್ಯರು ಸ್ಥಳದಲ್ಲಿಯೇ ಇದ್ದು ಗ್ರಾಮಸ್ಥರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎನ್.ಬಿ. ಕರ್ಲವಾಡ ತಿಳಿಸಿದ್ದಾರೆ.

ಗ್ರಾಮದಲ್ಲಿ ತೆರೆದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಕೆಲವರಿಗೆ ತುರ್ತು ಚಿಕಿತ್ಸೆ ನೀಡಿ ಅಗತ್ಯವಿದ್ದವರನ್ನು, ಆ್ಯಂಬುಲೆನ್ಸ್ ಮೂಲಕ ನವಲಗುಂದ ತಾಲೂಕು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇಲ್ಲಿಯ ವರೆಗೆ ಒಳ ಹಾಗೂ ಹೊರ ರೋಗಿಗಳು ಸೇರಿದಂತೆ ಒಟ್ಟು 159 ಜನರಿಗೆ ಚಿಕಿತ್ಸೆ ನೀಡಲಾಗಿದೆ.

ಗ್ರಾಮದ ಕೆರೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಕೆರೆಯಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕ ದುರಸ್ತಿ ಕಾರ್ಯ ನಡೆದಿದೆ. ಗ್ರಾಮದ ಎಲ್ಲ ಗಟಾರ್, ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಜಿಪಂ, ತಾಪಂ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂಗು ಗುಡಿಸಾಗರ ಗ್ರಾಪಂ ಅಧ್ಯಕ್ಷೆ ರತ್ನವ್ವ ಗುಡಸಲಮನಿ ಹೇಳಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ