ಗದಗ: ಕಾಲೇಜು ಶಿಕ್ಷಣ ಇಲಾಖೆ ನಡೆಸುತ್ತಿರುವ ಕೌನ್ಸೆಲಿಂಗ್ ನಿಲ್ಲಿಸಬೇಕು. ಸೇವೆಯಲ್ಲಿ ಇರುವವರನ್ನು ಮುಂದುವರಿಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಧರಣಿ ಸತ್ಯಾಗ್ರಹದಲ್ಲಿ ಅತಿಥಿ ಉಪನ್ಯಾಸಕರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
15- 20 ವರ್ಷಗಳಿಂದ ಸೇವೆ ಸಲ್ಲಿಸಿದವರನ್ನು ಕೈಬಿಡುವ ಮನೋಭಾವ ಸರಿಯಲ್ಲ. 2009ರ ಎಂಪಿಎಲ್ ಪದವಿ ಪರಿಗಣಿಸಬೇಕು. ಸರ್ಕಾರವೇ ನಮ್ಮ ಬಗ್ಗೆ ಆಸಕ್ತಿ ತೋರಿಸಬೇಕು. ಸರ್ಕಾರದ ಈ ನಿರ್ಧಾರದಿಂದ 6 ಸಾವಿರ ಅತಿಥಿ ಉಪನ್ಯಾಸಕರಿಗೆ ತೊಂದರೆಯಾಗಿದೆ. ಸಾವಿರಾರು ಕುಟುಂಬ ಬೀದಿಗೆ ಬಂದಿವೆ. ಉದ್ಯೋಗ ಕಳೆದುಕೊಂಡ ಎಲ್ಲರೂ ಕುಟುಂಬ ಸಮೇತ ಹೋರಾಟ ನಡೆಸುತ್ತಿರುವ ನಮಗೆ ಕಾನೂನು ತಿದ್ದುಪಡಿಗೆ ಆಗ್ರಹಿಸುತ್ತೇವೆ. ಅಲ್ಲದೆ ಇದಕ್ಕಾಗಿ ಸರ್ಕಾರ ಒಂದು ಸುಗ್ರೀವಾಜ್ಞೆ ಹೊರಡಿಸಬೇಕು. ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕು. ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದೇವೆ. ಇನ್ನೂ ಮುಂದಿನ ದಿನಮಾನಗಳಲ್ಲಿ ಉಗ್ರ ಸ್ವರೂಪದಲ್ಲಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಈ ವೇಳೆ ಮಾನವಿ, ಯಾದಗಿರಿ, ರಾಯಚೂರು, ಸಿಂಧನೂರು, ರಾಣಿಬೆನ್ನೂರು, ಹಾನಗಲ್ಲ, ಕಲಘಟಗಿ, ದಾಂಡೇಲಿ, ಹಳಿಯಾಳ, ಭಟ್ಕಳ, ಬಾಗಲಕೋಟೆ, ಅಂಕೊಲಾ, ಶಿರಸಿ, ಚಿಕ್ಕಮಗಳೂರು, ವಿಜಯನಗರ, ಹಾವೇರಿ, ಧಾರವಾಡ, ಕಡೂರ, ಬಳ್ಳಾರಿ, ತುಮಕೂರು, ಕೊಡಗು, ಬೆಳಗಾವಿ, ಉಡುಪಿ, ಕಾರ್ಕಳ, ಹೊಸಪೇಟೆ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಅತಿಥಿ ಉಪನ್ಯಾಸಕರು ಇದ್ದರು.