ಗದಗ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಎದುರು ನಡೆದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಮಂಗಳವಾರ ಪ್ರತಿಭಟನಾಕಾರರು ಕಾಂಗ್ರೆಸ್ ಪ್ರಕಟಿಸಿದ್ದ ಪ್ರಣಾಳಿಕೆ ಪಟ್ಟಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಕಲ್ಮನಿ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರು ಅಕ್ಷರಶಃ ಬೀದಿಗೆ ಬೀಳುತ್ತಿದ್ದಾರೆ. ಇದಕ್ಕೆ ಸರ್ಕಾರ ಕೈಗೊಂಡಿರುವ ಅಮಾನವೀಯ, ಅವೈಜ್ಞಾನಿಕ ನೀತಿಯೇ ಕಾರಣ ಎಂದು ಕಿಡಿಕಾರಿದರು.
ಕೂಡಲೇ ಸರ್ಕಾರ ಸೇವಾನುಭವ ಇರುವ ಅತಿಥಿ ಉಪನ್ಯಾಸಕರ ಸೇವೆಗೆ ಭದ್ರತೆ ನೀಡಬೇಕು. ಈಗ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯ ಕೌನ್ಸೆಲಿಂಗ್‌ನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಈ ಹೋರಾಟ ಮತ್ತೊಂದು ನರಗುಂದ ಬಂಡಾಯವಾಗುವ ನಿಟ್ಟಿನಲ್ಲಿ ಚಳವಳಿ ರೂಪಿಸಬೇಕಾಗುತ್ತದೆ. ಬೆಳಗಾವಿ ಅಧಿವೇಶನ ಆರಂಭ ಆಗುವುದರೊಳಗೆ ನಮ್ಮ ಬೇಡಿಕೆ ಈಡೇರಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ನಮ್ಮ ಹೋರಾಟ ಸರಕಾರಕ್ಕೆ ನಡುಕ ಹುಟ್ಟಿಸುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಮುಂಡರಗಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ದೇಸಾಯಿ, ಪಂಚಾಕ್ಷರಿ ಗವಾಯಿಗಳ ಕಾಲೇಜಿನ ಪ್ರಾ. ಡಾ. ಆರ್.ಎಸ್. ದಂಡತಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.ಈ ವೇಳೆ ವಿಜಯಪುರದ ರಾಮನಗೌಡ ಕಲ್ಲಿ, ಬೆಳ್ತಂಗಡಿಯ ಸಂತೋಷಕುಮಾರ, ಧರ್ಮಸ್ಥಳದ ಗಿರೀಶ್ ನಾಯಕ, ಉಡುಪಿಯ ಪವನಕುಮಾರ, ಧಾರವಾಡದ ದಾನೇಶ್ವರಿ, ಶಿರೂರು ಸೇರಿದಂತೆ ವಿವಿಧ ಜಿಲ್ಲೆಗಳ ಅತಿಥಿ ಉಪನ್ಯಾಸಕರು ಇದ್ದರು.