ಮುನಿರಾಬಾದ್: ತುಂಗಭದ್ರಾ ಜಲಾಶಯದ ನೂತನ ಗೇಟ್ ಅಳವಡಿಕೆ ಕಾರ್ಯ ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜು ಹೇಳಿದರು.
ತುಂಗಭದ್ರಾ ಜಲಾಶಯದ ಎಲ್ಲ ಗೇಟ್‌ಗಳು ಶಿಥಿಲಗೊಂಡಿದ್ದು, ನೂತನ ಗೇಟ್ ಅಳವಡಿಕೆ ಮಾಡಬೇಕಾದರೆ ಜಲಾಶಯದ ನೀರಿನ ಮಟ್ಟವು ಇನ್ನೂ 20 ಟಿಎಂಸಿ ಅಷ್ಟು ಕಡಿಮೆಯಾಗಬೇಕು. ಈ ನಿಟ್ಟಿನಲ್ಲಿ ತಾವು ಇಂದಿನ ಸಭೆಯಲ್ಲಿ ಕರ್ನಾಟಕ ಹಾಗೂ ಆಂಧ್ರದ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಮ್ಮ ಪಾಲಿನ ನೀರನ್ನು ಆದಷ್ಟು ಬೇಗ (ಇನ್ನು ಹತ್ತು ದಿನಗಳಲ್ಲಿ) ಬಳಕೆ ಮಾಡಿಕೊಳ್ಳಲು ಮನವಿ ಮಾಡಿರುವುದಾಗಿ ತಿಳಿಸಿದರು.
ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ತಮ್ಮ ಪಾಲಿನ ನೀರನ್ನು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಳಸುತ್ತಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಪಾಲಿನ ನೀರನ್ನು ಡಿಸೆಂಬರ್ ತಿಂಗಳಲ್ಲಿ ಬೆಳಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರ ಹಾಗೂ ಕರ್ನಾಟಕದ ಅಧಿಕಾರಿಗಳು ತಮ್ಮ ಪಾಲಿನ ನೀರನ್ನು ಆದಷ್ಟು ಬೇಗ ಬಳಸಲು ಒಪ್ಪಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ಜಲಾಶಯದ ಎಲ್ಲ 33 ಗೇಟ್ ಗಳನ್ನು ಜೂನ್ 2026 ಅಂತ್ಯದೊಳಗೆ ಅಳವಡಿಸಬೇಕೆಂದು ತಾವು ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಅಪ್ಪಣೆ ನೀಡಿರುವುದಾಗಿ ಸಚಿವರು ವಿವರಿಸಿದರು.