ಎಟಿಎಂ ಮಷಿನ್‌ ಕದ್ದು ತಳ್ಳು ಗಾಡಿಯಲ್ಲಿ ಹೊತ್ತೊಯ್ದರು!

KannadaprabhaNewsNetwork |  
Published : Dec 03, 2025, 02:00 AM IST
ಎಟಿಎಂ ಯಂತ್ರ ಕಳ್ಳತನ  | Kannada Prabha

ಸಾರಾಂಶ

ಇತ್ತೀಚೆಗೆ ರಾಜ್ಯದಲ್ಲಿ ಬ್ಯಾಂಕ್‌ ದರೋಡೆ, ಎಟಿಎಂ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ರಾತ್ರಿ ಇಂಡಿಯಾ ಬ್ಯಾಂಕ್‌ನ ಎಟಿಎಂ ಕಳ್ಳತನ ಮಾಡಲಾಗಿದೆ.

- ಒಡೆಯಲಾಗದೇ ರಸ್ತೇಯಲ್ಲೇ ಬಿಟ್ಟು ಪರಾರಿ- ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಘಟನೆ

---

ವಂಟಮೂರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಖಾಸಗಿ ಎಟಿಎಂಗೆ ಕಳ್ಳತನ

ಕಳ್ಳತನ ಬಳಿಕ ತಳ್ಳೋಗಾಡಿಯಲ್ಲಿ ಎಟಿಎಂ ಇಟ್ಟುಕೊಂಡು ಸ್ಥಳದಿಂದ ಪರಾರಿ

ಬಳಿಕ ಗಾಡಿಯಿಂದ ಕಾರಿಗೆ ಯಂತ್ರ ಹಾಕಿ, ದೂರ ಕೊಂಡೊಯ್ದು ಒಡೆಯಲು ಯತ್ನ

ಆದರೆ ಎಟಿಎಂ ಯಂತ್ರ ಒಡೆಯಲಾಗದೇ ರಸ್ತೆಯಲ್ಲೇ ಬಿಟ್ಟು ಹೋದ ವಂಚಕರು

---ಕನ್ನಡಪ್ರಭ ವಾರ್ತೆ ಬೆಳಗಾವಿ

ಇತ್ತೀಚೆಗೆ ರಾಜ್ಯದಲ್ಲಿ ಬ್ಯಾಂಕ್‌ ದರೋಡೆ, ಎಟಿಎಂ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸೋಮವಾರ ರಾತ್ರಿ ಇಂಡಿಯಾ ಬ್ಯಾಂಕ್‌ನ ಎಟಿಎಂ ಕಳ್ಳತನ ಮಾಡಲಾಗಿದೆ. ಮುಖಕ್ಕೆ ಮಾಸ್ಕ್​ ಹಾಕಿಕೊಂಡಿದ್ದ ಮೂವರು ಖದೀಮರು, ತಳ್ಳುವ ಗಾಡಿ ತಂದು, ಅದರಲ್ಲಿ ಎಟಿಎಂ ಮಷಿನ್ ಹೊತ್ತುಕೊಂಡು ಹೋಗಿದ್ದಾರೆ. ಆದರೆ, ಅದರಲ್ಲಿನ ಹಣ ತೆಗೆಯಲು ಬಾರದ್ದರಿಂದ ಎಟಿಎಂ ಮಷಿನ್‌ನ್ನು ಎಸೆದು ಪರಾರಿಯಾಗಿದ್ದಾರೆ. ಘಟನೆ ನಡೆದ ಎರಡು ಗಂಟೆಯಲ್ಲೇ ಎಟಿಎಂ ಯಂತ್ರವನ್ನು ಪತ್ತೆ ಮಾಡಿರುವ ಪೊಲೀಸರು, ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ತಳ್ಳೋಗಾಡಿ ಬಳಸಿ ಕಳ್ಳತನ:

ಸೋಮವಾರ ರಾತ್ರಿ ಮಾಸ್ಕ್‌ ಧರಿಸಿದ್ದ ಮೂವರು ಖದೀಮರು ವಂಟಮೂರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇರುವ ಇಂಡಿಕ್ಯಾಶ್ ಎಟಿಎಂ ಒಳಗಡೆ ಬಂದಿದ್ದಾರೆ. ಮೊದಲು ಸಿಸಿಟಿವಿ ಕ್ಯಾಮರಾ ಮತ್ತು ಸೈರನ್ ಸೆನ್ಸಾರ್‌ಗಳ ಮೇಲೆ ಕಪ್ಪು ಸ್ಪ್ರೇ ಹಾಕಿ ಅವುಗಳನ್ನು ಕುರುಡಾಗಿಸಿದ್ದಾರೆ. ನಂತರ, ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಮಷೀನ್ ಓಪನ್ ಮಾಡಲು ಯತ್ನಿಸಿದ್ದಾರೆ. ಲಾಕ್‌ ತೆರೆಯಲು ಸಾಧ್ಯವಾಗದಿದ್ದಾಗ ಪೂರ್ತಿ ಮಷೀನ್ ನ್ನೇ ಎತ್ತುಕೊಂಡು, ತಾವು ತಂದಿದ್ದ ತಳ್ಳುಗಾಡಿಯಲ್ಲಿ ಅದನ್ನು ಇಟ್ಟು, ಸುಮಾರು 200 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ತಮ್ಮ ಕಾರಿಗೆ ಲೋಡ್ ಮಾಡಿಕೊಂಡಿದ್ದಾರೆ. ಬಳಿಕ, ವಾಪಸ್‌ ಬಂದು, ಎಟಿಎಂ ಬಳಿಯೇ ತಳ್ಳುಗಾಡಿಯನ್ನು ಬಿಟ್ಟು ಹೋಗಿದ್ದಾರೆ. ಆದರೆ, ಅದರಲ್ಲಿನ ಹಣ ತೆಗೆಯಲು ಬಾರದೇ ಎಟಿಎಂನ್ನು ಎಸೆದು ಹೋಗಿದ್ದಾರೆ. ಎಟಿಎಂನಲ್ಲಿ ಸುಮಾರು ₹1 ಲಕ್ಷಕ್ಕಿಂತ ಹೆಚ್ಚು ನಗದು ಇತ್ತು ಎಂದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಕಾಕತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆ ನಡೆದ ಎರಡು ಗಂಟೆಯಲ್ಲೇ ಎಟಿಎಂ ಯಂತ್ರವನ್ನು ಪೊಲೀಸರು ಪತ್ತೆ ಮಾಡಿದ್ದು, ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಎಟಿಎಂ ಒಳಗಿನ ಕ್ಯಾಮರಾಗಳು ಕಪ್ಪು ಸ್ಪ್ರೇಯಿಂದ ಕುರುಡಾಗಿದ್ದರೂ, ಹೊರಗಿನ ಕೆಲವು ಕ್ಯಾಮರಾಗಳಲ್ಲಿ ಮೂವರು ಆರೋಪಿಗಳ ಮುಖ ಮತ್ತು ಚಟುವಟಿಕೆ ಸೆರೆಯಾಗಿದೆ. ಮುಖವಾಡ ಧರಿಸಿದ್ದರೂ ಅವರ ದೇಹಬಲ, ಚಲನವಲನದ ಗುರುತು ಪೊಲೀಸರಿಗೆ ಸಿಕ್ಕಿದೆ. ಇದು ವೃತ್ತಿಪರ ಗ್ಯಾಂಗ್ ನ ಕೃತ್ಯ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಹದಿನೈದು ದಿನಗಳ ಹಿಂದಷ್ಟೇ, ನವೆಂಬರ್‌ 19ರಂದು ಬೆಂಗಳೂರಿನ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಮಟಮಟ ಮಧ್ಯಾಹ್ನದ ಹೊತ್ತಿನಲ್ಲೇ ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಖದೀಮರು 7.11 ಕೋಟಿ ನಗದನ್ನು ದರೋಡೆ ಮಾಡಿದ್ದರು. ಇದರ ಬೆನ್ನಲ್ಲೇ, ಮತ್ತೊಂದು ಎಟಿಎಂ ಕಳ್ಳತನದ ಪ್ರಕರಣದ ನಡೆದಿದೆ.

==

ಕಳ್ಳರು ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಮಷಿನ್ ಓಪನ್ ಮಾಡಲು ಯತ್ನಿಸಿದ್ದಾರೆ. ಆಗ ಮಷೀನ್ ಓಪನ್ ಆಗದ ಕಾರಣ ಎಟಿಎಂ ಸಮೇತ ತಳ್ಳುಗಾಡಿ ಎಸೆದು ಪರಾರಿಯಾಗಿದ್ದಾರೆ. ಎಟಿಎಂನಲ್ಲಿ ಒಂದು ಲಕ್ಷ ರು.ಹಣವಿತ್ತು ಅನ್ನೋ ಮಾಹಿತಿ ಇದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.

- ಭೂಷಣ್ ಬೊರಸೆ, ಪೊಲೀಸ್ ಆಯುಕ್ತರು ಬೆಳಗಾವಿ ನಗರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ