ಕನ್ನಡಪ್ರಭ ವಾರ್ತೆ ಮೈಸೂರುಭಾರತೀಯ ಭಾಷಾ ಸಂಸ್ಥಾನದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಗೊಳಿಸಿ ಸ್ಥಳಾಂತರಿಸುವಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಒತ್ತಾಯಿಸಲಾಗಿದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಸದಸ್ಯರು ಶನಿವಾರ ಸಂಸದರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.ಭಾಷಾ ಸಂಸ್ಥಾನದಲ್ಲಿರುವ ಕೇಂದ್ರವನ್ನು ಪ್ರತ್ಯೇಕಗೊಳಿಸಿ ತಮಿಳುನಾಡು ಮಾದರಿಯಲ್ಲಿ ಬೇರೆಡೆ ನಡೆಸುವ ಸಂಬಂಧ ಚರ್ಚಿಸಿದರು. 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆತಿದ್ದು, 2011ರಲ್ಲಿ ಭಾರತೀಯ ಭಾಷಾ ಸಂಸ್ಥಾನದ ಅಡಿಯಲ್ಲಿ ಅಧಿಕೃತವಾಗಿ ಕಚೇರಿ ಆರಂಭವಾಗಿದೆ. ಪ್ರಸ್ತುತ ಕೇಂದ್ರವು ಮಾನಸಗಂಗೋತ್ರಿಯ ಎನ್.ಸಿ.ಎಚ್.ಎಸ್. ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಇದರೊಂದಿಗೆ ಪ್ರತ್ಯೇಕವಾಗಿ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರವು ಮೈಸೂರು ವಿವಿಗೆ ಸೇರಿದ 4.02 ಎಕರೆ ಜಾಗವನ್ನು ನೀಡಿದ್ದು, ಈ ಸ್ಥಳದಲ್ಲಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸುವ ಮೂಲಕ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಬರುವಂತೆ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಸಂಸದ ಯುದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರವನ್ನು ಪ್ರತ್ಯೇಕಗೊಳಿಸಿ ಕಾರ್ಯಾರಂಭಿಸುವ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಕೇಂದ್ರಕ್ಕೆ ಅಗತ್ಯವಿರುವ ಜಾಗ ನೀಡುವ ಪ್ರಕ್ರಿಯೆ ಸೇರಿದಂತೆ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಕಸಾಪ ಮಾತುಕತೆ ನಡೆಸುವ ಮೂಲಕ ಸಹಕಾರ ನೀಡಬೇಕು ಎಂದರು.ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್, ಪ್ರೊ. ನೀಲಗಿರಿ ಎಂ. ತಳವಾರ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್, ಅರವಿಂದ ಶರ್ಮಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ. ಗುರುರಾಜ್, ಒಕ್ಕಲಿಗರ ವಿಕಾಸ ವೇದಿಕೆಯ ಯಮುನಾ ಇದ್ದರು.