ಬೆಂಗಳೂರು : ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಅಣೆಕಟ್ಟಿನಲ್ಲಿ ಸದ್ಯ ಸಂಗ್ರಹವಾಗಿರುವ ನೀರು ಮುಂದಿನ ಮೂರ್ನಾಲ್ಕು ತಿಂಗಳು ಕುಡಿಯುವ ನೀರಿನ ಬಳಕೆಗೆ ಬೇಕಾಗಲಿದ್ದು, ಸದ್ಯಕ್ಕೆ ಕೃಷಿ ಚಟುವಟಿಕೆಗೆ ನೀರು ಪೂರೈಕೆ ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಕೆಆರ್‌ಎಸ್‌ ಜಲಾಶಯ ವ್ಯಾಪ್ತಿಯ ನೀರಿನ ಸ್ಥಿತಿಗತಿ ಕುರಿತು ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ರಾಮಲಿಂಗಾರೆಡ್ಡಿ ಸಭೆ ನಡೆಸಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಮೈಸೂರು, ಮಂಡ್ಯ, ಚಾಮರಾಜನಗರ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ಸಭೆ ನಡೆಸಲಾಗಿದೆ. ಸದ್ಯ ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ 14.50 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಅದರಲ್ಲಿ ಡೆಡ್‌ ಸ್ಟೋರೇಜ್‌ ಹೊರತುಪಡಿಸಿ 10.10 ಟಿಎಂಸಿ ಅಡಿಗಳಷ್ಟನ್ನು ಬಳಕೆ ಮಾಡಬಹುದು. ಇಷ್ಟು ಪ್ರಮಾಣದ ನೀರು ಮುಂದಿನ ಮೂರ್ನಾಲ್ಕು ತಿಂಗಳು ಕುಡಿಯುವ ನೀರಿನ ಪೂರೈಕೆಗೆ ಬಳಕೆಯಾಗಲಿದೆ. ಉಳಿದಂತೆ ಕೆಆರ್‌ಎಸ್‌ ಜಲಾನಯನ ಪ್ರದೇಶದಲ್ಲಿನ ರೈತರಿಗೆ ಕೃಷಿ ಚಟುವಟಿಕೆ ನೀರು ಪೂರೈಕೆ ಸದ್ಯಕ್ಕೆ ಸಾಧ್ಯವಿಲ್ಲ. ನೀರಿನ ಸಂಗ್ರಹ ಹೆಚ್ಚಳವಾದರೆ ಕೃಷಿಗೂ ನೀರು ಹರಿಸಲಾಗುವುದು ಎಂದರು.


ತ.ನಾಡಿಗೆ ನೀರು ಬಿಡಲು ಸಾಧ್ಯವಿಲ್ಲ:

ಕುಡಿಯುವ ನೀರಿಗಾಗಿ ನಾವು ಜಲಾಶಯದ ನೀರು ಸಂಗ್ರಹಿಸಬೇಕಿದೆ. ಹೀಗಾಗಿ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಈ ಹಿಂದೆ ನ್ಯಾಯಾಧಿಕರಣದಲ್ಲಾದ ನಿರ್ಧಾರದಂತೆ ಜೂನ್‌ ಮತ್ತು ಜುಲೈ ತಿಂಗಳಲ್ಲಿ 40 ಟಿಎಂಸಿ ಅಡಿಗಳಷ್ಟು ನೀರನ್ನು ತಮಿಳುನಾಡಿನ ಬಿಳಿಗುಂಡ್ಲುಗೆ ಬಿಡುಗಡೆ ಮಾಡಬೇಕಿತ್ತು. ಮಳೆ ಕೊರತೆ, ನೀರಿನ ಸಂಗ್ರಹ ಇಳಿಕೆಯಿಂದಾಗಿ ಜೂನ್‌ನಿಂದ ಈವರೆಗೆ 3 ಟಿಎಂಸಿ ಅಡಿಗಳಷ್ಟು ನೀರು ಮಾತ್ರ ಬಿಡಲಾಗಿದೆ. ಸದ್ಯ ಕೊಡಗು ಸೇರಿ ಮತ್ತಿತರ ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಒಳಹರಿವು ಹೆಚ್ಚಿದೆ. ಉಳಿದಂತೆ ಕಾವೇರಿ ನದಿಗೆ ಸಂಬಂಧಿಸಿದ ಕೆಆರ್‌ಎಸ್‌, ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯಗಳಿಗೆ 41,731 ಕ್ಯುಸೆಕ್ಸ್‌ ಒಳಹರಿವಿದೆ. ಇದು ಹೀಗೆಯೇ ಮುಂದುವರಿದರೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ತಮಿಳುನಾಡಿಗೆ ನೀರು ಬಿಡುಗಡೆ ವಿಚಾರದಲ್ಲಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ನೀಡುವ ನಿರ್ದೇಶನವನ್ನು ನಾವು ಪಾಲಿಸುತ್ತೇವೆ. ಜು.15ಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಿದ್ದು, ಅಲ್ಲಿ ವಸ್ತುಸ್ಥಿತಿಯನ್ನು ನಾವು ವಿವರಿಸುತ್ತೇವೆ. ಅದನ್ನಾಧರಿಸಿ ಅವರು ನಿರ್ಧರಿಸಲಿದ್ದಾರೆ. ಕುಡಿಯುವ ಉದ್ದೇಶಕ್ಕೆ ನೀರು ಬಳಕೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಉಳಿದದ್ದನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನ ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಜಿ.ಟಿ.ದೇವೇಗೌಡ, ರಮೇಶ್‌ ಬಂಡಿಸಿದ್ದೇಗೌಡ, ಕೆ.ಎಂ. ಉದಯ್‌, ದರ್ಶನ್‌ ಧ್ರುವನಾರಾಯಣ್‌, ರವಿ ಗಣಿಗ, ದಿನೇಶ್‌ ಗೂಳಿಗೌಡ ಇತರರಿದ್ದರು.

ಮೋಡ ಬಿತ್ತನೆಗೆ ಚಿಂತನೆ:

ಕರ್ನಾಟಕ ಸೇರಿ ದೇಶದ 12 ರಾಜ್ಯಗಳಲ್ಲಿ ಮಳೆ ಕೊರತೆಯಿದೆ ಎಂಬ ವರದಿಯಿದೆ. ಹೀಗಾಗಿ ಮಳೆಯನ್ನು ಹೆಚ್ಚಿಸುವ ಉದ್ದೇಶದಿಂದಾಗಿ ಮೋಡ ಬಿತ್ತನೆ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈ ಹಿಂದೆಯೂ ಕೆಲ ಬಾರಿ ರಾಜ್ಯದಲ್ಲಿ ಮೋಡ ಬಿತ್ತನೆಯಾಗಿತ್ತು. ಈ ಬಾರಿಯೂ ಮೋಡ ಬಿತ್ತನೆ ಮಾಡಬಹುದೇ ಎಂಬ ಬಗ್ಗೆ ವರದಿ ಪಡೆಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ತಜ್ಞರೊಂದಿಗೆ ಚರ್ಚೆ ನಡೆಸಿ, ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.