ಮಾಗಡಿ: ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯವನ್ನು ಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸೇರಿದಂತೆ ತಾಲೂಕಿನಲ್ಲಿ ಐಸಿಹಾಸಿಕ ಕೋಟೆ ಕೊತ್ತಲ, ದೇವಾಲಯಗಳನ್ನು ಪ್ರಮುಖ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಮಾಡಿದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಆಗುವುದಲ್ಲದೆ, ಪ್ರವಾಸೋದ್ಯಮದ ಆದಾಯವೂ ವೃದ್ಧಿಯಾಗಲಿದೆ. ಬೆಂಗಳೂರಿಗೆ ಕೇವಲ 50 ಕಿಲೋ ಮೀಟರ್ ದೂರದಲ್ಲಿರುವ ಮಾಗಡಿ ತಾಲೂಕಿನ ಪ್ರವಾಸೋದ್ಯಮಕ್ಕೆ ಶಾಸಕ ಬಾಲಕೃಷ್ಣ ಅವರು ಇಚ್ಚಾಸಕ್ತಿ ತೋರಬೇಕು.
ಅರ್ಕಾವತಿ-ಕುಮುದ್ವತಿ ನದಿಗೆ ಅಡ್ಡಲಾಗಿ ಅಣೆಕಟ್ಟು:ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿ ಮತ್ತು ಕುಮುದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಅಣೆಕಟ್ಟು ರಮಣೀಯ ಪರಿಸರವನ್ನು ಹೊಂದಿದೆ. ಅರ್ಕಾವತಿ ನದಿ ನಂದಿ ಬೆಟ್ಟದಲ್ಲಿ ಹುಟ್ಟಿ ದೊಡ್ಡಬಳ್ಳಾಪುರದ ಹಳ್ಳಿಗಳಲ್ಲಿ ಹರಿದು ಹಲವು ಕೆರೆಗೆ ಕಟ್ಟೆಗಳನ್ನು ತುಂಬಿಸಿ, ಬೆಂಗಳೂರು ಉತ್ತರ ತಾಲೂಕು ಹೆಸರುಘಟ್ಟ ಕೆರೆ, ಮಾಕಳಿ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯದ ಮುಖಾಂತರ ನೀರು ಹರಿದು ಮಂಚನಬೆಲೆ ಸೇರುತ್ತದೆ. ಕುಮುದ್ವತಿ ನದಿ ಹರಿಯುವ 278 ಹಳ್ಳಿಗಳಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮಂಚನಬೆಲೆ ಅಣೆಕಟ್ಟು 83 ಅಡಿ ಎತ್ತರವಿದ್ದು, ಈ ಜಲಾಶಯ ಭರ್ತಿಯಾದರೆ ಮಾಗಡಿ ಪಟ್ಟಣ ಹಾಗೂ ಬಿಡದಿ ಪಟ್ಟಣಕ್ಕೂ ಕುಡಿಯುವ ನೀರಿನ ಯೋಜನೆ ರೂಪಿಸುವುದಲ್ಲದೆ, ರಾಮನಗರಕ್ಕೂ ಕೃಷಿ ಚಟುವಟಿಕೆಗೆ ನೀರು ಪೂರೈಸುವ ಯೋಜನೆಯಿದೆ.
ಬೋಟಿಂಗ್ ವ್ಯವಸ್ಥೆ ಆಗಬೇಕು:ಪ್ರವಾಸಿಗರನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ಈಗಾಗಲೇ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ನಲ್ಲಿಗುಡ್ಡ ಕೆರೆ ಹಾಗೂ ಕಣ್ವ ಜಲಾಶಯದಲ್ಲೂ ಬೋಟಿಂಗ್ ವ್ಯವಸ್ಥೆ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅದೇ ಮಾದರಿಯಲ್ಲಿ ಮಂಚನಬೆಲೆ ಜಲಾಶಯದ ಹಿನ್ನಿರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು. ಸಂಜೆ ಸೂರ್ಯಾಸ್ತಮಯದ ರಮಣೀಯ ದೃಶ್ಯಗಳನ್ನು ಕಾಣಬಹುದು.
ಜಲಾಶಯಕ್ಕೆ ಹಣ ಮೀಸಲು:
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಚನಬೆಲೆ ಜಲಾಶಯವನ್ನು ಬೃಂದಾವನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು 150 ಎಕರ ಜಾಗವನ್ನು ಬಜೆಟ್‌ನಲ್ಲಿ ₹ 100 ಕೋಟಿ ಅನುದಾನವನ್ನು ಮೀಸಲಿಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಈಗಾಗಲೇ ಎರಡುವರೆ ವರ್ಷ ಪೂರೈಸಿದ್ದು ಮಂಚನಬೆಲೆ ಜಲಾಶಯ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು.
ಕೆಂಗೇರಿ ಮಾರ್ಗವಾಗಿ ದೊಡ್ಡಾಲದ ಮರದಿಂದ ಕೇವಲ 20 ಕಿಲೋ ಮೀಟರ್ ಕ್ರಮಿಸಿದರೆ ಮಂಚನಬೆಲೆ ಜಲಾಶಯ ಸಿಗಲಿದೆ. ಈಗಾಗಲೇ ಪ್ರವಾಸಿಗರು ಬಿಡದಿಯ ವಂಡರ್ ಲಾ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಿದ್ದು ಮಂಚನಬೆಲೆ ಜಲಾಶಯದಲ್ಲಿ ಪ್ರವಾಸಿಗರಿಗೆ ಬೋಟಿಂಗ್, ರಾತ್ರಿ ತಂಗುವ ವ್ಯವಸ್ಥೆ, ಬೃಂದಾವನ ಮಾದರಿಯಲ್ಲಿ ಬೆಳಕಿನ ಕಾರಂಜಿ, ಸಂಗೀತ ಕಾರಂಜಿ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಿದರೆ ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದಿಲ್ಲ ಅನುಮಾನವಿಲ್ಲ. ಈಗಲಾದರೂ ಸರ್ಕಾರ ಮಂಚನಬೆಲೆ ಜಲಾಶಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಬೇಕಿದೆ.ಕೋಟ್...........
ಮಂಚನಬೆಲೆ ಜಲಾಶಯದಲ್ಲಿ ದೊಡ್ಡ ಮಟ್ಟದಲ್ಲಿ ಬೋಟಿಂಗ್ ವ್ಯವಸ್ಥೆ ಚಿಂತನೆ ಮಾಡಿ ಖಾಸಗಿಯವರ ಜತೆ ಮಾತನಾಡಿದ್ದೇನೆ. ಬೋಟಿಂಗ್ ಜೊತೆಗೆ ಸಾಹಸ ಕ್ರೀಡೆಗಳಿಗೂ ಅವಕಾಶ ಕಲ್ಪಿಸಲು ಸಾವಿರ ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಆಗಬೇಕೆಂದು ಅಂದಾಜು ಮಾಡಲಾಗಿದೆ. ಮತ್ತೊಮ್ಮೆ ಟೆಂಡರ್ ಕರೆದು ಮಂಚನಬೆಲೆ ಜಲಾಶಯದ ಅಭಿವೃದ್ಧಿಗೆ ಚಿಂತನೆ ನಡೆಯುತ್ತಿದೆ.-ಎಚ್.ಸಿ.ಬಾಲಕೃಷ್ಣ, ಶಾಸಕರು