ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಜೇನುಕಲ್ ಆಸ್ಪತ್ರೆಯ ಕಟ್ಟಡ ಉದ್ಘಾಟನೆ ಹಾಗೂ ಆಸ್ಪತ್ರೆಯ ಸೇವಾರಂಭ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯನ ಅತಿಯಾದ ಆಸೆ ಮತ್ತು ಸಂಪಾದನೆಯ ಹಂಬಲದಿಂದ ಜೀವನದಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮನುಷ್ಯ ತನ್ನ ಆಸೆ- ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದಾನೆ. ಆದರೆ ಹಣ ಸಂಪಾದಿಸುವ ಧಾವಂತದಲ್ಲಿ ತನ್ನ ಆರೋಗ್ಯವನ್ನೇ ಕಡೆಗಣಿಸುತ್ತಿದ್ದಾನೆ. ಕಷ್ಟಪಟ್ಟು ದುಡಿದು ಗಳಿಸಿದ ಹಣವನ್ನು ಸುಖಮಯ ಜೀವನಕ್ಕಾಗಿ ಬಳಸಬೇಕಾದ ವ್ಯಕ್ತಿ, ಅದೇ ದುಡಿಮೆಯ ಒತ್ತಡದಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಆದ್ದರಿಂದ ದೈಹಿಕ ಆರೋಗ್ಯದ ಕಾಳಜಿಯೊಂದಿಗೆ ಮಾನಸಿಕ ನೆಮ್ಮದಿಗೂ ಆದ್ಯತೆ ನೀಡಬೇಕು. ಆಸ್ಪತ್ರೆಗಳು ರೋಗಗಳಿಗೆ ಚಿಕಿತ್ಸೆ ನೀಡಿದರೆ, ಮಠ-ಮಂದಿರಗಳು ಮನುಷ್ಯನ ಮನಸ್ಸಿಗೆ ಶಾಂತಿ, ಸಂಯಮ ಹಾಗೂ ಸನ್ನಡತೆಯ ಬದುಕಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಇಂದಿನ ಸಮಾಜದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳು ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಮನುಷ್ಯನ ಜೀವನಶೈಲಿ ಹಾಗೂ ಆರೋಗ್ಯದ ಗುಣಮಟ್ಟದಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.ಹಿಂದಿನ ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆಯಿದ್ದರೂ ಸಮಾಜದಲ್ಲಿ ಪರಸ್ಪರ ಹೊಂದಾಣಿಕೆ, ಸಹಬಾಳ್ವೆ ಹೆಚ್ಚಾಗಿತ್ತು. ಆದರೆ ಇಂದು ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಜಗಳ, ಸಂಘರ್ಷ ಹಾಗೂ ಮನಸ್ತಾಪಗಳೂ ಹೆಚ್ಚಾಗುತ್ತಿರುವುದು ವಿಷಾದನೀಯ. ಹಿಂದೆ ವೈದ್ಯರ ಸಂಖ್ಯೆ ಕಡಿಮೆಯಿದ್ದರೂ ಆರೋಗ್ಯವಂತ ಜನರ ಸಂಖ್ಯೆ ಹೆಚ್ಚಾಗಿತ್ತು. ಪ್ರಸ್ತುತ ವೈದ್ಯಕೀಯ ಸೌಲಭ್ಯಗಳು ಹೆಚ್ಚಾಗಿದ್ದರೂ ವಿವಿಧ ಕಾಯಿಲೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮನುಷ್ಯನ ದುರಾಸೆ, ಅತಿಯಾದ ಆಸೆ ಮತ್ತು ಬದಲಾದ ಜೀವನಶೈಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಹಣ ಮತ್ತು ಸೌಲಭ್ಯಗಳ ಹಿಂದೆ ಓಡುವುದಕ್ಕಿಂತ ಆರೋಗ್ಯಕರ ಜೀವನ ಹಾಗೂ ಉತ್ತಮ ಸಂಸ್ಕಾರಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಕಿವಿಮಾತು ಹೇಳಿದರು.ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮನುಷ್ಯ ಸಾಕಷ್ಟು ಮುಂದುವರಿದಿದ್ದರೂ ತನ್ನ ಮೂಲ ಸಂಸ್ಕೃತಿ, ಪರಂಪರೆ ಹಾಗೂ ಬೆಳೆದು ಬಂದ ಹಾದಿಯನ್ನು ಮರೆಯುತ್ತಿರುವುದು ಸರಿಯಲ್ಲ ಎಂದರು.ವೈಜ್ಞಾನಿಕ ಪ್ರಗತಿ ಮಾನವ ಜೀವನವನ್ನು ಸುಲಭಗೊಳಿಸಿದೆ. ಆದರೆ ಕೇವಲ ಆಧುನಿಕತೆಯ ಹಿಂದೆ ಸಾಗುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ನಮ್ಮ ಸನಾತನ ಧರ್ಮದ ಮೌಲ್ಯಗಳು, ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರ ಅನುಭವ, ಧಾರ್ಮಿಕ ಚಿಂತನೆ ಹಾಗೂ ಮಠಾಧೀಶರ ಧರ್ಮ ಸಂದೇಶಗಳು ಮನುಷ್ಯನಿಗೆ ಸರಿಯಾದ ದಾರಿಯನ್ನು ತೋರಿಸುತ್ತವೆ. ಶ್ರೀಗಳ ಆಶೀರ್ವಚನ ಮತ್ತು ಮಾರ್ಗದರ್ಶನದಿಂದ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜಮುಖಿ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.ಅರಸೀಕೆರೆ ನಗರದಲ್ಲಿ ಬಹುದಿನಗಳಿಂದ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿತ್ತು. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ. ರಾಕೇಶ್, ಡಾ. ರೇಖಾ ರಾಕೇಶ್ ಹಾಗೂ ಡಾ. ಮಧುಸೂದನ್ ಅವರು ನೂತನವಾಗಿ ಶ್ರೀ ಜೇನುಕಲ್ ಆಸ್ಪತ್ರೆಯನ್ನು ಆರಂಭಿಸಿರುವುದು ಸಂತಸದ ಸಂಗತಿಯಾಗಿದೆ. ಈ ಆಸ್ಪತ್ರೆಯ ಮೂಲಕ ನಗರದ ಜನತೆಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಸುನ್ನಿ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ನಜಾರ್ ಅಲಾಮ್ ಸಲಾಮಿ ಇಮಾಮ್ ಸಾಬ್, ಸಂತ ಮರಿಯ ಚರ್ಚ್ನ ಧರ್ಮಗುರುಗಳಾದ ಡೇವಿಡ್ ಆಂತೋಣಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಎಂ. ಸಮಿಉಲ್ಲಾ, ಜಿಲ್ಲಾ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಜಿ. ಬಿ. ಶಶಿಧರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತ್ ಕುಮಾರ್, ತಾಲೂಕು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಧರ್ಮಶೇಖರ್, ಶಿವ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಜಿ.ವಿ. ಬಸವರಾಜ್ ಸೇರಿದಂತೆ ಹಲವು ಗಣ್ಯರು, ವೈದ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.