ಯುವ ವೈದ್ಯರಿಗೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯ

KannadaprabhaNewsNetwork |  
Published : Aug 01, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ        | Kannada Prabha

ಸಾರಾಂಶ

ಚಿತ್ರದುರ್ಗದ ಐಎಂಎ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಯೋ ನಿವೃತ್ತಿಯಾದ ಡಾ.ಎಸ್.ಎಚ್ ದೇವರಾಜ್ ದಂಪತಿಯ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಉದಯೋನ್ಮುಖ ವೈದ್ಯರು ಹಾಗೂ ಹೌಸ್ ಸರ್ಜನ್‍ಗಳಿಗೆ ಸರಿಯಾದ ದಿಕ್ಕು ತೋರಿಸಲು, ತರಬೇತಿ ನೀಡಲು ಮಾರ್ಗದರ್ಶಿ ಹಾಗೂ ಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿಎಂಸಿಆರ್‍ಐ) ಡೀನ್ ಹಾಗೂ ನಿರ್ದೇಶಕ ಡಾ.ಬಿ.ವೈ.ಯುವರಾಜ್ ಅಭಿಪ್ರಾಯಪಟ್ಟರು.

ನಗರದ ಐಎಂಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಿರಿಯ ಮಕ್ಕಳ ತಜ್ಞ ಡಾ.ಎಸ್.ಎಚ್.ದೇವರಾಜ್ ಅವರ ವಯೋನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಸ್ಪತ್ರೆಗೆ ಬರುವ ಹೌಸ್ ಸರ್ಜನ್‍ಗಳು (ಇಂಟರ್ನ್ಸ್) ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಡಾ.ದೇವರಾಜ್ ಅವರಂತಹ ಹಿರಿಯ ಹಾಗೂ ಅನುಭವಿ ಮಾರ್ಗದರ್ಶಕರ ಅಗತ್ಯವಿದೆ. ಹೊಸದಾಗಿ ಬರುವ ವೈದ್ಯರು ಆರಂಭದಲ್ಲಿ ಅಸ್ಪಷ್ಟತೆಯಿಂದ ಇರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಸಿಗುವುದು ಅವರ ಪುಣ್ಯದ ಫಲ. ಆದ್ದರಿಂದ ಡಾ.ದೇವರಾಜ್ ಅವರು ನಮ್ಮ ಸಂಸ್ಥೆಯಲ್ಲಿ ಕನಿಷ್ಠ ಇನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ಯುವ ವೈದ್ಯರನ್ನು ತರಬೇತುಗೊಳಿಸಬೇಕು ಎಂದು ಮನವಿ ಮಾಡಿದರು.

ಚಿತ್ರದುರ್ಗ ಸಿಎಂಸಿಆರ್‌ಐ ಬೋಧಕ ಆಸ್ಪತ್ರೆ ಮಕ್ಕಳ ವಿಭಾಗದಿಂದ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಮೂಲಕ ಮತ್ತು ಆಸ್ಪತ್ರೆಯ ಪ್ರಗತಿಗೆ ಶ್ರಮಿಸಿದ ಹಿರಿಯ ಮಕ್ಕಳ ತಜ್ಞ ಡಾ. ಎಸ್.ಎಚ್. ದೇವರಾಜ್ ಅವರು ಇಡೀ ವಿಭಾಗವನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ ರವೀಂದ್ರ ಶ್ಲಾಘಿಸಿದರು.

ಬಿಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಎಚ್.ದೇವರಾಜ್, ವೈದ್ಯಕೀಯ ವೃತ್ತಿ ಎಂಬುದು ಕೇವಲ ಔಷಧ ಮತ್ತು ಚಿಕಿತ್ಸೆಗೆ ಸೀಮಿತವಾಗಿರದೆ, ರೋಗಿಗಳಿಗೆ ಪ್ರೀತಿ, ಸಾಂತ್ವನ ಮತ್ತು ಸಕಾರಾತ್ಮಕ ಶಕ್ತಿ ನೀಡುವ ಪವಿತ್ರ ಸೇವೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೈದ್ಯರ ಕೈಗುಣ ಎನ್ನುವುದು ಕೇವಲ ಔಷಧಿಯಲ್ಲಿ ಇರುವುದಿಲ್ಲ. ರೋಗಿ ಹಾಗೂ ಅವರ ಪೋಷಕರೊಂದಿಗೆ ನಾವು ಹೇಗೆ ಸ್ಪಂದಿಸುತ್ತೇವೆ, ಅವರ ನೋವಿಗೆ ಹೇಗೆ ಧೈರ್ಯ ತುಂಬುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳ ಚಿಕಿತ್ಸೆ ವೇಳೆ ಪೋಷಕರೊಂದಿಗೆ ಸೌಜನ್ಯದಿಂದ ವ್ಯವಹರಿಸಿ, ಅವರಿಗೆ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಅರ್ಧ ರೋಗ ನಿವಾರಣೆಯಾಗುತ್ತದೆ ಎಂದು ತಿಳಿಸಿದರು.

ವೈದ್ಯಕೀಯ ಕ್ಷೇತ್ರಕ್ಕೆ ಬರುವ ಯುವ ವೈದ್ಯರು ರೋಗಿಗಳ ಸೇವೆಗೆ ಆದ್ಯತೆ ನೀಡಬೇಕು. ಧನಾತ್ಮಕ ಚಿಂತನೆ ಹಾಗೂ ತಾಳ್ಮೆಯಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಸಿಗುವ ಗೌರವ ಮತ್ತು ತೃಪ್ತಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಕಿರಿಯ ವೈದ್ಯರಿಗೆ ಕಿವಿಮಾತು ಹೇಳಿದರು.

ಸಿಎಂಸಿಆರ್‌ಐ ಬೋಧಕ ಆಸ್ಪತ್ರೆಯ ಹಿರಿಯ ವೈದ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪಿಡಿಯಾಟ್ರಿಕ್ ವಿಭಾಗದ ಸಿಬ್ಬಂದಿ ಹಾಗೂ ನಗರದ ಪ್ರಮುಖ ವೈದ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಡ್ರೋನ್ ಪ್ರಯೋಗಾಲಯ
ತಮಿಳುನಾಡಿಗೆ ನೀರು ಹರಿಸುವುದು ಬೇಡ