ಬಳ್ಳಾರಿ: ಹಿರಿಯ ನಾಗರಿಕರು ಸಮಾಜದ ಬೇರುಗಳು. ಒಂದು ದೇಶ, ರಾಜ್ಯ ಅಭಿವೃದ್ಧಿಯಾಗಲು ಹಿರಿಯ ನಾಗರಿಕರ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರನ್ನು ಕಡೆಗಣಿಸುತ್ತಿರುವುದು ಕಂಡುಬರುತ್ತಿದ್ದು, ವಿಷಾದನೀಯ ಸಂಗತಿಯಾಗಿದೆ. ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು. ಅವರನ್ನು ಕಡೆಗಣಿಸದೇ ಕಾಳಜಿ ವಹಿಸಿ ಒಂಟಿತನ ಕಾಡದೇ ಹಾಗೆ ನೋಡಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಹಿರಿಯ ನಾಗರಿಕರಿಗೆ ಬೇಕಾದ ಗೌರವ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಹಿರಿಯ ನಾಗರಿಕರು ನಿಮ್ಮಲ್ಲಿರುವ ಯಾವುದೇ ಕಾನೂನಾತ್ಮಕ ಸಮಸ್ಯೆಗಳಿದ್ದರೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕ ಎಂದು ತಿಳಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಮಾತನಾಡಿ, ಹಿರಿಯ ನಾಗರಿಕರ ಅನುಭವದಿಂದ ದೇಶವು ಅಭಿವೃದ್ಧಿಯಲ್ಲಿ ಸಾಗುತ್ತಿದೆ. ನಮ್ಮ ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಸಹ ಹಿರಿಯ ನಾಗರಿಕರಾಗಿದ್ದು, ದೇಶವನ್ನು ಅಭಿವೃದ್ಧಿಯ ಕಡೆ ಮುನ್ನೆಡೆಸುವಲ್ಲಿ ಅವರ ಮಾರ್ಗದರ್ಶನವು ಅತ್ಯಂತ ಮಹತ್ತರವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಹಿರಿಯ ನಾಗರಿಕರ ಆರ್ಥಿಕ ಸಬಲತೆಯ ದೃಷ್ಠಿಯಿಂದ 60-65 ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನ ಹಾಗೂ ಇತರೆ ಯೋಜನೆಗಳನ್ನು ಜಾರಿಗೊಳಿಸಿದ್ದು, ಹಿರಿಯ ನಾಗರಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನಕುಮಾರ್ ಮಾತನಾಡಿ, ಮಕ್ಕಳು ತಮ್ಮ ಪೋಷಕರನ್ನು ಆರೈಕೆ ಮಾಡದೇ ಇರುವುದು, ವೃದ್ಧಾಶ್ರಮಕ್ಕೆ ಸೇರಿಸುವುದು, ಆಸ್ತಿ ಕಲಹ ಇನ್ನಿತರೆ ಸಮಸ್ಯೆಗಳು ಇದ್ದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನ್ಯಾಯಮಂಡಳಿ ಇದ್ದು, ಹಿರಿಯ ನಾಗರಿಕರ ಕಾಯ್ದೆ-2007ರಡಿ ದೂರು ಸಲ್ಲಿಸಿ ವಿಚಾರಣೆ ನಡೆಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶತಾಯುಷಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಬಳಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಗೋವಿಂದಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಸವಿತಾ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಹಿರಿಯ ಸಾಹಿತಿಎನ್.ಡಿ. ವೆಂಕಮ್ಮ, ಸ್ಮೈಲ್ ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಇದ್ದರು.