ಧರ್ಮ ಸಮಾರಂಭಗಳಿಂದ ಸಮಾಜಕ್ಕೆ ಮಾರ್ಗದರ್ಶನ: ಶಿವಯೋಗಿ ಶ್ರೀ

KannadaprabhaNewsNetwork | Published : Dec 18, 2024 12:47 AM

ಸಾರಾಂಶ

ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಸೋಮವಾರ ಶ್ರೀ ಹೋಳಿಬಸವೇಶ್ವರ ಕಾರ್ತಿಕೋತ್ಸವ ನಡೆಯಿತು.

ಹಿರೇಕೆರೂರು: ಧರ್ಮ ಸಮಾರಂಭಗಳಿಂದ ಸಮಾಜಕ್ಕೆ ಮಾರ್ಗದರ್ಶನ ಸಿಗುತ್ತದೆ ಎಂದು ರಾಣಿಬೆನ್ನೂರಿನ ಶನೇಶ್ವರ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಸೋಮವಾರ ಶ್ರೀ ಹೋಳಿಬಸವೇಶ್ವರ ಕಾರ್ತಿಕೋತ್ಸವ ಹಾಗೂ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಭಾರತೀಯ ಸನಾತನ ಧರ್ಮ ಉಳಿಸುವ ಸಂಸ್ಕೃತಿಯೇ ನಮ್ಮ ಹಿಂದೂ ದೇವಾಲಯಗಳು, ದೀಪ ಹೇಗೆ ಬೆಳಗುತ್ತದೆ ಹಾಗೆ ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಬಹಿರಂಗದ ಕತ್ತಲನ್ನು ಹೋಗಲಾಡಿಸಿ ಮನುಷ್ಯನನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗುತ್ತದೆ. ಬಾಗಿದವರು ಬೆಳೆಯುತ್ತಾರೆ, ಬೀಗಿದವರು ಬೀಳುತ್ತಾರೆ. ಮನುಷ್ಯ ಬೆಳಿಬೇಕು, ಆದರೆ, ತುಳಿದು ಬೆಳೆಯಬಾರದು ಎಂದು ಶ್ರೀಗಳು ಹೇಳಿದರು.

ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕೋಣಂದೂರು ಶಿವಲಿಂಗೇಶ್ವರ ಬ್ರಹನ್ಮಠ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಪ್ರಜ್ವಲಿಸುವ ದೀಪ ತನ್ನ ಪ್ರಕಾಶಕ್ಕೆ ಯಾವುದೇ ತೊಂದರೆ ಆಗದಂತೆ ಸಾವಿರಾರು ದೀಪಗಳನ್ನು ಪ್ರಜ್ವಲಿಸುತ್ತದೆ. ನೆಮ್ಮದಿ ಮತ್ತು ಶಾಂತಿ ಇತರರಿಂದ ಪಡೆಯಲು ಸಾಧ್ಯವಿಲ್ಲ. ಆಚರಣೆಯ ಮೂಲಕ ಪಡೆಯಲು ಸಾಧ್ಯ. ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದಕ್ಕಿಂತಲೂ,ಬದುಕಿನ ಮಾರ್ಗ ಮುಖ್ಯವಾಗಿರುತ್ತದೆ ಎಂದು ಶ್ರೀಗಳು ಹೇಳಿದರು.

ಹಂಸಬಾವಿಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ದಿಕ್ಸೂಚಿ ಭಾಷಣ ಮಾಡಿದ ಭಾವನಾ ಆರ್. ಗೌಡ. ದೇಶದ ಎಲ್ಲ ದೇಶಭಕ್ತರನ್ನು ಸ್ಮರಿಸಿ. ಜಗತ್ತಿಗೆ ಒಳ್ಳೆ ಸಂಸ್ಕೃತಿ ಕೊಟ್ಟ ನಮ್ಮ ಭಾರತ ದೇಶದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕು. ಭವ್ಯ ಭಾರತ ಕಟ್ಟಲು ಯುವ ಜನತೆ ಬೇಕು ಎಂದು ಹೇಳಿದರು. ಈ ಕಾರ್ತಿಕೋತ್ಸವಕ್ಕೆ ದೇಣಿಗೆ ನೀಡಿದ ಎಲ್ಲ ಮಹನೀಯರನ್ನು ಸ್ಮರಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರ್ ಹುಚಗೊಂಡ್ರ, ಬಸವರಾಜ್ ಮಲ್ಲಜ್ಜರ್, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ಮೋಹನ್ ಗೌಡ ಪಾಟೀಲ್, ಜಯಪ್ಪ ಬಂಡೇರ, ಶಿವಯೋಗಿ ಹುಚ್ಚಗೊಂಡರ, ರೇಖಾ ಪಾಟೀಲ್, ಶಿವಯೋಗಿ ಸೋ ಹುಚಗೊಂಡ್ರ, ಸೋಮಶೇಖರ್ ಕೊಳ್ಳಿ ಇದ್ದರು. ಸಂಗೀತ ಸ್ಫೂರ್ತಿ ಚಪ್ಪರದಳ್ಳಿ ಮಠ ಪ್ರಾರ್ಥಸಿದರು. ಪ್ರಭು ಹಾಲಿವಾಡಿಮಠ ಸ್ವಾಗತಿಸಿದರು. ಸೋಮು ಕೊಳ್ಳಿ ವಂದಿಸಿದರು.

Share this article