ಕನ್ನಡಪ್ರಭ ವಾರ್ತೆ, ತುಮಕೂರು
ಭೂ ಮಂಜೂರಿಯಂತೆ ಸರ್ಕಾರಿ ಸರ್ವೇ ನಂಬರುಗಳಿಂದ ಪ್ರತ್ಯೇಕಿಸಿ ಹಿಡುವಳಿ ಭೂಮಿಯನ್ನಾಗಿಸುವ ಪೋಡಿ ದುರಸ್ತಿಯ ಪ್ರಕ್ರಿಯೆಯಲ್ಲಿನ ಕಠಿಣ ನಿಯಮಗಳನ್ನು ಸರ್ಕಾರ ಸರಳೀಕರಣ ಮಾಡಿರುವ ಪರಿಣಾಮ ಸರ್ಕಾರಿ ನಂಬರುಗಳಲ್ಲಿನ ಮಂಜೂರಿ ರೈತಾಪಿ ವರ್ಗದವರಿಗೆ ಈ ನಿಯಮಗಳಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ದರಖಾಸ್ತು ಮತ್ತು ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಸರ್ಕಾರವು ನಮೂನೆ 1-5ನ್ನು ತಯಾರಿಸುವ ಪ್ರಕ್ರಿಯೆಯನ್ನು ಸರಳೀಕರಿಸಿದ್ದು, ಕನಿಷ್ಠ 3 ಮಂಜೂರಿ ದಾಖಲೆಗಳು ಲಭ್ಯವಿದ್ದಲ್ಲಿ ತಹಶೀಲ್ದಾರ್‌ಗಳು ನೈಜತೆ ಪರಿಶೀಲಿಸಿ ಪೋಡಿಗೆ ಕ್ರಮವಹಿಸಲು ಆದೇಶ ನೀಡಲಿದ್ದಾರೆ. ನಮೂನೆ 1-5 ತಯಾರಿಸಲು ಹೊಸದಾಗಿ ತಂತ್ರಾಂಶವನ್ನೂ ಸಹ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಒಂದು ಸರ್ವೆ ನಂಬರಿಗೆ ಸಂಬಂಧಿಸಿದ ಎಲ್ಲ ಮಂಜೂರಿ ದಾಖಲೆಗಳನ್ನು ಕ್ರೋಢೀಕರಿಸಿ ನಮೂನೆ 1-5ನ್ನು ತಂತ್ರಾಂಶದಲ್ಲಿ ದಾಖಲಿಸಿ, ಮಂಜೂರಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ತಂತ್ರಾಂಶದಲ್ಲಿ ಸಂರಕ್ಷಿಸಲಾಗುವುದು.ದರಖಾಸ್ತು ಪೋಡಿಯನ್ನು ಆಂದೋಲನದ ರೂಪದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕನಿಷ್ಠ 100 ಮಂಜೂರಿದಾರರು ಸೇರಿ ಒಟ್ಟು 1000 ಮಂಜೂರಿದಾರರಿಗೆ 2025ರ ಜನವರಿ 26ರೊಳಗಾಗಿ ನಮೂನೆ 1 ರಿಂದ 5ನ್ನು ಭರ್ತಿ ಮಾಡಿ ಪೋಡಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಆಯಾ ತಾಲೂಕಿನ ತಹಶೀಲ್ದಾರ್ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರುಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.