ಗುಲ್ ಮೋಹರ್ ರಂಗು ಹೊದ್ದ ಕುಷ್ಟಗಿ

KannadaprabhaNewsNetwork |  
Published : May 15, 2026, 02:30 AM IST
ಪೋಟೊ13ಕೆಎಸಟಿ1: ಕುಷ್ಟಗಿ ಪಟ್ಟಣದಲ್ಲಿ ಬೆಳೆದು ನಿಂತ ಗುಲ್ ಮೋಹರ್ ಹೂವಿನ ಗಿಡಗಳು.13ಕೆಎಸಟಿ1ಎ: ಶಾರದಾ ಶೆಟ್ಟರ ಪರಿಸರ ಪ್ರೇಮಿಗಳು ಕುಷ್ಟಗಿ. | Kannada Prabha

ಸಾರಾಂಶ

ವಿವಿಧ ಶಾಲಾ ಕಾಲೇಜು, ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಗುಲ್ ಮೋಹರ್ ಮರಗಳು ಹೂಗಳಿಂದ ತುಂಬಿ ಸುಂದರ ದೃಶ್ಯ ನಿರ್ಮಿಸಿವೆ

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಬೇಸಿಗೆಯ ಬಿಸಿಲಿನ ನಡುವೆ ಕುಷ್ಟಗಿ ಪಟ್ಟಣ ಈಗ ಗುಲ್‌ ಮೋಹರ್‌ ಕೆಂಪು ಹೂಗಳನ್ನು ಹೊದ್ದು ರಂಗು ರಂಗಾಗಿ ಕಂಗೊಳಿಸುತ್ತಿದೆ!

ಪಟ್ಟಣದ ವಿವಿಧ ಸರ್ಕಾರಿ ಕಚೇರಿ ಆವರಣ, ರಸ್ತೆಗಳ ಇಕ್ಕೆಲಗಳಲ್ಲಿ ಅರಳಿರುವ ಗುಲ್ ಮೋಹರ್ ಹೂವುಗಳು ಜನರ ಗಮನ ಸೆಳೆಯುತ್ತಿವೆ.

ಮೇ ತಿಂಗಳ ಹೆಸರನ್ನೇ ಧರಿಸಿಕೊಂಡು ಮೆರೆಯುವ ಮೇ ಫ್ಲವರ್ ಪಟ್ಟಣದ ನ್ಯಾಯಾಲಯದ ಆವರಣ, ಲೋಕೊಪಯೋಗಿ ಇಲಾಖೆ, ಸರ್ಕಾರಿ ಆಸ್ಪತ್ರೆ ಹತ್ತಿರ, ತಾಪಂ, ಶಾಸಕರ ಕಾರ್ಯಾಲಯ, ವಿವಿಧ ಶಾಲಾ ಕಾಲೇಜು, ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಗುಲ್ ಮೋಹರ್ ಮರಗಳು ಹೂಗಳಿಂದ ತುಂಬಿ ಸುಂದರ ದೃಶ್ಯ ನಿರ್ಮಿಸಿವೆ.

ಬೇಸಿಗೆ ಕಾಲದಲ್ಲಿ ಮರದ ಎಲೆಗಳಿಗಿಂತ ಹೂಗಳೇ ಹೆಚ್ಚು ಕಾಣುವಷ್ಟು ಅರಳಿರುವ ಗುಲ್ ಮೋಹರ್ ಮರಗಳು ಪರಿಸರಕ್ಕೆ ಹೊಸ ಜೀವ ತುಂಬಿವೆ. ಕೆಂಪು ಬಣ್ಣದ ಹೂಗಳು ನೆಲದ ಮೇಲೆ ಬಿದ್ದು ರಸ್ತೆಗಳಿಗೆ ಪ್ರಕೃತಿಯ ರೇಸಿಮೆ ಹಾಸು ಹರಡಿದಂತೆ ಕಾಣುತ್ತಿದೆ.

ನೌಕರರು, ಸಾರ್ವಜನಿಕರು ಕಚೇರಿಗಳಿಗೆ ಭೇಟಿ ನೀಡುವಾಗ ಈ ಹೂಗಳ ಸೌಂದರ್ಯ ಮೆಚ್ಚಿ ಕ್ಷಣಕಾಲ ನಿಂತು ನೋಡುತ್ತಾರೆ. ಪಟ್ಟಣದ ಸೌಂದರ್ಯ ಹೆಚ್ಚಿಸುವ ಜತೆಗೆ ಈ ಮರಗಳು ಉತ್ತಮ ನೆರಳನ್ನು ನೀಡುತ್ತಿವೆ.

ಅಷ್ಟೆ ಅಲ್ಲದೆ ತಾಲೂಕಿನ ತಾವರಗೇರಾ, ಹನುಮನಾಳ, ದೋಟಿಹಾಳ, ಹನುಮಸಾಗರ, ಮುದೇನೂರು ಸೇರಿದಂತೆ ಇತರೆ ಗ್ರಾಮಗಳಿಗೆ ತೆರಳುವ ಮಾರ್ಗದಲ್ಲಿ ಹೆಚ್ಚಾಗಿ ಕಾಣುವ ಗುಲ್ ಮೋಹರ್‌ ಮರಗಳು ದಾರಿ ಹೋಕರ ಮನ ಸೆಳೆಯುತ್ತಿವೆ.

ಕಣ್ಮನ ಸೆಳೆಯುವ ಹೂ: ಕಡು ಕೆಂಪು ಬಣ್ಣದ ಹೂಗಳನ್ನು ಹೊದ್ದುಕೊಂಡು ಸಂಭ್ರಮಿಸುತ್ತಿದೆ. ಅಲಂಕಾರಕ್ಕಾಗಿ ಈ ಹೂವುಗಳ ಬಳಕೆ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ಈ ಹೂಗಳು ಬರೀ ನೋಡಲು ಮಾತ್ರ ಸುಂದರ. ಮರದಲ್ಲಿ ವಿವಿಧ ಚಿತ್ತಾಕರ್ಷಕ ಹೂ ಗೊಂಚಲು ನಗೆ ಬೀರಿದರೆ, ಉದುರಿದ ದಳಗಳು ನೆಲದಲ್ಲಿ ಹೂ ಹಾಸಿಗೆಯಂತೆ ಕಂಗೊಳಿಸುತ್ತಿವೆ ಆಕರ್ಷಣೆ ಜತೆಗೆ ಸುಗಂಧ ಬೀರುವುದರಿಂದ ಇನ್ನಷ್ಟು ಸವಿಯಬೇಕೆನಿಸುತ್ತದೆ. ಬಣ್ಣ ಬಣ್ಣದ ಹೂವುಗಳು ಅರಳಿ ನಿಲ್ಲುವುದು ಕಣ್ಮನ ಸೆಳೆಯುತ್ತಿದೆ.

ಕ್ಷೀಣಿಸುತ್ತಿರುವ ಗುಲ್ ಮೋಹರ್: ಗುಲ್ ಮೋಹರ್ ಹೂವಿಗೆ ಗ್ರಾಮೀಣ ಭಾಗದ ಹಬ್ಬಗಳಲ್ಲಿ ತಳಿರು ತೋರಣ ಕಟ್ಟುವುದು ಸಮಾರಂಭದಲ್ಲಿ ಚಪ್ಪರದ ತುಂಭಾ ಗುಲ್ ಮೋಹರ್ ಹೂವುಗಳದ್ದೇ ಕಾರುಬಾರು ಇರುತ್ತಿತ್ತು. ಗ್ರಾಮೀಣ ಭಾಗದಲ್ಲಿ ಊರಿನ ಮಧ್ಯದಲ್ಲಿ ಮರಗಳನ್ನು ಅಲಂಕಾರಕ್ಕಾಗಿ ಬೆಳೆಸುತ್ತಿದ್ದರು. ರೈತರ ಜಮೀನಿನ ಬದುಗಳಲ್ಲಿ ಇರುತ್ತಿದ್ದವು ಉದ್ಯಾನಗಳ ಅಂದ ಹೆಚ್ಚಿಸಲು ಶಾಲೆ ವಾತಾವರಣ ತಂಪಾಗಿಡಲು, ರಸ್ತೆಯ ಇಕ್ಕೆಲಗಳಲ್ಲಿ ವಿಭಜಕಗಳಲ್ಲಿ ಜಾನುವಾರುಗಳ ಓಡಾಟ ಹೆಚ್ಚಿರುವ ಜಾಗಗಳಲ್ಲಿ ಗುಲ್ಮೊಹರ್ ರಂಗು ಇದ್ದೇ ಇರುತ್ತಿತ್ತು. ಆದರೆ, ಇತ್ತೀಚೆಗೆ ಗುಲ್ ಮೋಹರ್ ಕ್ಷೀಣಿಸಿದಂತಿದೆ ಈ ಹೂವುಗಳನ್ನು ಕಿತ್ತು ಅಲಂಕಾರಕ್ಕೆ ಬಳಸಿ ಸಂಭ್ರಮಿಸುವವರ ಸಂಖ್ಯೆಯೂ ಕಡಿಮೆಯಾಗಿದೆ.

ಜಪಾನ ದೇಶದಲ್ಲಿನ ಚೆರ್ರಿ ಹೂವುಗಳಂತೆ ನಮ್ಮ ದೇಶದಲ್ಲಿ ಈ ಮೇ ಫ್ಲವರ್ (ಗುಲ್ ಮೋಹರ್) ಬೇಸಿಗೆಯಲ್ಲಿ ಹೂ ಬಿಡುವ ಮೂಲಕ ಜನರನ್ನು ಆಕರ್ಷಿತರನ್ನಾಗಿಸುವ ಜತೆಗೆ ಮನಮೋಹಕವಾಗಿ ಕಾಣುತ್ತಿದ್ದು, ಮನಸ್ಸಿಗೆ ಮುದ ನೀಡುವ ಅತೀ ಸುಂದರ ಪುಷ್ಪವಾಗಿದೆ. ಕುಷ್ಟಗಿಯಲ್ಲಿ ಬಹಳಷ್ಟು ಮರಗಳಿದ್ದು ನೆರಳು ನೀಡುವ ಜತೆಗೆ ಪಟ್ಟಣದ ಸೌಂದರ್ಯ ಹೆಚ್ಚಿಸಿ ಪಕ್ಷಿಗಳಿಗೆ ಆಶ್ರಯವಾಗುತ್ತಿವೆ ಇಂತಹ ಮರಗಳನ್ನು ಅಭಿವೃದ್ಧಿ ನೆಪದಲ್ಲಿ ನಾಶಮಾಡದೆ ಬೆಳೆಸಿಕೊಂಡು ಉಳಿಸಿ ಹೋಗಬೇಕಿದೆ ಎಂದು ಪರಿಸರ ಪ್ರೇಮಿ ಶಾರದಾ ಶೆಟ್ಟರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಲೂಕು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪಗೆ ಆಹ್ವಾನ
ಸುನಿಲ್ ಕುಮಾರ್ ಮೇಲೆ ಕ್ರಮಕ್ಕೆ ಮಹಿಳಾ ಕಾಂಗ್ರೆಸ್ ಮನವಿ