ಶೇಷಮೂರ್ತಿ ಅವಧಾನಿ
ಕಲಬುರಗಿ ಲೋಕ ಸಮರದಲ್ಲಿ ಕಮಲ ಮುದುಡಿತು ಹೇಗೆ?
ಪ್ರಧಾನಿ ನರೇಂದ್ರ ಮೋದಿಯವರೇ ಕಲಬುರಗಿಗೆ ಬಂದು ದೇಶದ ಲೋಕ ಕದನದ ರಣಕಹಳೆ ಕಲಬುರಗಿಯಲ್ಲೇ ಮೊಳಗಿಸಿದ್ದರೂ ಕೂಡಾ ಲೋಕಲ್ ಬಿಜೆಪಿ ಸಂಘಟನೆ ಮೋದಿ ಅಲೆಯನ್ನ ತನ್ನ ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಎಡವಿತು ಯಾಕೆ?ಮಳೆ ನಿಂತರೂ ಮರದಿಂದ ಮಳೆ ಹನಿ ಉದುರೋದು ನಿಲ್ಲೋದಿಲ್ಲ ಎಂಬ ಮಾತಿನಂತೆ ಚುನಾವಣೆ, ಮತ ಎಣಿಕೆ ಎಲ್ಲಾ ಮುಗಿದರೂ ರಾಜಕೀಯ ಚರ್ಚೆ ಮಾತ್ರ ನಿಂತಿಲ್ಲ, ಕಲಬುರಗಿ ಲೋಕ ಕದನದ ಫಲಿತಾಂಶ ಹೊರಬಿದ್ದ ನಂತರದಲ್ಲಿ ಕ್ಷೇತ್ರಾದ್ಯಂತ ಚರ್ಚೆಗಳು ಸಾಗಿವೆ.
ರಾಮ ಮಂದಿರ ನಿರ್ಮಾಣದ ಪರಿಣಾಮ ಕಲಬುರಗಿಯಲ್ಲಿ ಬೇರುಮಟ್ಟ ತಲುಪಿದ್ದರೂ ಬಿಜೆಪಿ ಇದನ್ನ ಮತಗಳನ್ನಾಗಿ ಪರಿವರ್ತಿಸುವಲ್ಲಿ ಎಡವಿತು, ಅತಿಯಾದ ವಿಶ್ವಾಶದಲ್ಲಿದ್ದು ಗೆದ್ದೇ ಗೆಲ್ಲುತ್ತೇವೆಂದು ಬೀಗಿದ್ದೇ ಆ ಪಕ್ಷದ ಸೋಲಿಗೆ ಕಾರಣವಾಯ್ತು ಎಂದೂ ಅನೇಕರು ಹೇಳುತ್ತಿದ್ದಾರೆ.
ಬಂಜಾರಾ ಮತಗಳ ಜೊತೆಗೇ ಮೇಲ್ವರ್ಗದ ಮತಗಳನ್ನು ಸೆಳೆದರೆ ಸಾಕೆಂಬ ಬಿಜೆಪಿ ಇಲ್ಲಿನ ಸರಳ ಗಣಿತ ಕೈ ಕೊಟ್ಟಿದೆ. ಕಾಂಗ್ರೆಸ್‌ನ ಹುರಿಯಾಳು ರಾಧಾಕೃಷ್ಣ ಎಲ್ಲಾ ಜಾತಿ ಜನ ಸಮೂಹದಲ್ಲಿ ಹೊಂದಿರುವ ವೈಯಕ್ತಿಕ ಸಂಪರ್ಕವೇ ಇಂದು ಅವರನ್ನು ಗೆಲುವಿನ ಸೋಪಾನಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಗುಟ್ಟೇನಲ್ಲ.
ಪುನರಾಯ್ಕೆ ಬಯಸಿದ್ದ ಡಾ. ಉಮೇಶ ಜಾಧವ್ ಜಾಗದಲ್ಲಿ ಟಿಕೆಟ್ ಬೇರಾರೂ ಬಯಸದೆ ಇದ್ದರೂ ಕೂಡಾ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಆಕಾಂಕ್ಷಿಯಾಗಿದ್ದಲ್ಲದೆ ಕೊನೆ ಹಂತದಲ್ಲಿ ಅವರ ಹೆಸರೂ ಚರ್ಚೆಗೆ ಬಂದಿತ್ತು.
ಪುನರಾಯ್ಕೆ ಪಕ್ಷದಲ್ಲೇ ಬೇಡವಾಗಿತ್ತೆ?: ಉಮೇಶ ಜಾದವರನ್ನ ಸಂಸತ್ತಿಗೆ ಪುನಃ ಕಳುಹಿಸುವಲ್ಲಿ ಪಕ್ಷದ ಹಲವು ಸ್ತರಗಳಲ್ಲಿರುವ ಮುಖಂಡರಿಗೆ ಬೇಡವಾಗಿತ್ತೆ? ಇಂತಹದ್ದೊಂದು ಚರ್ಚೆ ಸಾಗಿದೆ. 2019 ರಲ್ಲಿ ಬಿಜೆಪಿಗೆ ಇದ್ದಂತಹ ಅನುಕೂಲಕರ ವಾತಾವರಣ ಈ ಬಾರಿ ಇಲ್ಲದೆ ಹೋದರೂ ಕೂಡಾ ಮತದಾರರಂತೂ ಕ್ಷೇತ್ರಾದ್ಯಂತ ಇದ್ದರು. ಮತದಾರರ ನಾಡಿ ಮಿಡಿತ ಅರಿಯುವಲ್ಲಿ ಪಕ್ಷ ಎಡವಿದ್ದೇ ಸೋಲಿಗೆ ಕಾರಣವಾಯ್ತು.
ಅಭಿವೃದ್ಧಿ ಮರೀಚಿಕೆ ಆರೋಪ: ಖರ್ಗೆಯವರ ಸೋಲಾದ ನಂತರದಲ್ಲಿ ಕೇಂದ್ರ ಕಲಬುರಗಿಯತ್ತ ಕಡೆಗಣ್ಣ ನೋಟ ಹರಿಸುತ್ತಿದೆ. ಪ್ರಗತಿ ಮರೀಚಿಕೆಯಾಗಿದೆ, ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳಿಲ್ಲಿ ಕೈಗೂಡಿಲ್ಲ. ವಿಭಾಗೀಯ ರಲ್ವೆ ಯೋಜನೆ, ಏಮ್ಸ್ , ಟೆಕ್ಸಟೈಲ್ ಪಾರ್ಕ್, ಸೇರಿದಂತೆ ಅನೇಕ ಯೋಜನೆಗಳು ಕಲಬುರಗಿಗೆ ಎಟುಕಿಲ್ಲವೆಂಬ ಇಲ್ಲಿನ ಜನಾಕ್ರೋಶ ಜಾಧವ ಚೆನ್ನಾಗಿ ಅರಿತಿದ್ದರೂ ಕೂಡಾ ತಮಗೆ ದೊರಕಿದ 5 ವರ್ಷಗಳ ಕಾಲಾವಧಿಯಲ್ಲಿ ಇಂತಹ ಯೋಜನೆಗಳ ಬಗ್ಗೆ ಆಸಕ್ತಿ ತೋರಿ ಅವು ಕೈಗೂಡುವಂತೆ ಮಾಡಡದೆ ಕಡೆಗಣಿಸದರು ಎಂಬ ಅಸಮಧಾನವೂ ಕ್ಷೇತ್ರಾದ್ಯಂತ ಮಡುಗಟ್ಟಿತ್ತು. ಕಾಂಗ್ರೆಸ್ ಇದನ್ನೇ ತನ್ನ ಪ್ರಚಾರದ ಸರಕಾಗಿಸಿಕೊಂಡು ಅವಕಾಶ ಸಿಕ್ಕಾಗೆಲ್ಲ ಜಾಧವ್, ಬಿಜೆಪಿಗೆ ಟೀಕಿಸಿತ್ತು. ಇದೂ ಬಿಜೆಪಿ ಸೋಲಿನ ಕಾರಣಗಳಲ್ಲಿ ಪ್ರಮುಖ ಸಂಗತಿಯಾಯ್ತು.
ರೇಲ್ವೆ ಬೇಡಿಕೆಗೆ ಮುಂಚೆಯೇ ಸ್ಪಂದಿಸಬಹುದಿತ್ತಲ್ಲವೆ?
ಕಲಬುರಗಿಯಿಂದ ಬೆಂಗಳೂರಿಗೆ ರೇಲ್ವೆ ಸವಲತ್ತಿಲ್ಲ, ಎಲ್ಲೆಂದರಲ್ಲಿ ಕುಳಿತು ಪ್ರಯಾಣಿಸೋದು ದುಸ್ತರವಾಗಿರೋದು ಎಲ್ಲರಿಗೂ ಗೊತ್ತಿರೋ ಸಂಗತಿ. ರೇಲ್ವೆ ಬೇಡಿಕೆ ಬಗಗ್ಗೆ ಜನ ಆಗಾಗ ಧ್ವನಿ ಎತ್ತುತ್ತಿರೋದನ್ನ ಮನಗಂಡು ಡಾ. ಜಾಧವ್ ತಮ್ಮ ಅವಧಿಯಲ್ಲಿ ಬೇಗ ಸ್ಪಂದಿಸಲೇ ಇಲ್ಲ. ಇನ್ನೇನು ಲೋಕಸಬೆ ಚುನಾವಣೆ ಘೋಷಣೆಗೆ ದಿನಗಣನೆ ಶುರುವಾದಾಗ ವಂದೇ ಭಾರತ ರೈಲು ಕಲಬುರಗಿಯಿಂದ ಓಡಿಸಿದರೂ ಅದು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರೇಲ್ವೆ ಸಂಬಂಧಿ, ಹೆದ್ದಾರಿ ಸಂಬಂಧಿ ಹಲವು ಬೇಡಿಕಗಳಿದ್ದರೂ ಸ್ಪಂದನೆ ಜನರ ನಿರೀಕ್ಷೆಗೆ ತಕ್ಕಂತೆ ಕಾಣದೆ ಹೋದಾಗ ಜನ ಭ್ರಮನಿರಸನಗೊಂಡಿರೋದನ್ನ ಅನೇಕ ಸಂದರ್ಭಗಳಲ್ಲಿ ಎತ್ತಿ ತೋರಿಸಿದ್ದರೂ ಬಿಜೆಪಿ ಎಚ್ಚೆತ್ತು ಕಲಬುರಗಿಯತ್ತ ನೋಡದ ಬೆಳವಣಿಗೆ ಜನಮನ ಘಾಸಿಗೊಳಿಸಿತ್ತು.ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನ ಕಾರ್ಯಕರ್ತರು ಪೂರ್ಣ ಸಹಕಾರ ನೀಡಿದ ಪರಿಣಾಮವಾಗಿ ಇಷ್ಟು ಮತಗಳನ್ನು ಗಳಿಸಲು ಸಾಧ್ಯವಾಗಿದೆ. ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಬೆಂಬಲ ನೀಡಿದ ಮತದಾರರಿಗೆ ಮತ್ತು ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಲು ಗೆಲುವಿನ ಸೋಪಾನ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯನ್ನು ಮಾಡಿ ಬರುವ ಚುನಾವಣೆಗಳನ್ನು ಪ್ರಾಮಾಣಿಕವಾಗಿ ಗೆಲ್ಲುವ ಪ್ರಯತ್ನ ಮಾಡೋಣ.- ಡಾ. ಉಮೇಶ ಜಾಧವ್, ಮಾಜಿ ಸಂಸದರು, ಕಲಬುರಗಿ