ಮಂಗಳೂರು: ಟೈಮ್ಸ್ ಹೈಯರ್ ಎಜುಕೇಶನ್ (THE) ಬಿಡುಗಡೆ ಮಾಡಿರುವ 2027ರ ವಿಶ್ವ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ಅಂತಾರಾಷ್ಟ್ರೀಯ ದೃಷ್ಟಿಕೋನ (International Outlook) ವಿಭಾಗದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ತುಂಬೆ ಗ್ರೂಪ್‌ನ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿರುವ GMU, ಈ ವಿಭಾಗದಲ್ಲಿ 99.4 ಅಂಕ ಗಳಿಸಿದ್ದು, 118 ದೇಶಗಳು ಹಾಗೂ ಪ್ರದೇಶಗಳ ಒಟ್ಟು 2,297 ವಿಶ್ವವಿದ್ಯಾಲಯಗಳ ಪೈಕಿ ಅತ್ಯುನ್ನತ ಸ್ಥಾನ ಪಡೆದಿದೆ. ಯುಎಇ ಮಟ್ಟದಲ್ಲಿಯೂ ಅಂತಾರಾಷ್ಟ್ರೀಯ ದೃಷ್ಟಿಕೋನ ವಿಭಾಗದಲ್ಲಿ GMU ನಂ.1 ಸ್ಥಾನ ಗಳಿಸಿದೆ.
THE ವಿಶ್ವವಿದ್ಯಾಲಯಗಳನ್ನು ಮೌಲ್ಯಮಾಪನ ಮಾಡುವ ಐದು ಪ್ರಮುಖ ಮಾನದಂಡಗಳ ಪೈಕಿ ಅಂತಾರಾಷ್ಟ್ರೀಯ ದೃಷ್ಟಿಕೋನವೂ ಒಂದಾಗಿದೆ. ವಿಶ್ವವಿದ್ಯಾಲಯದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ, ವಿವಿಧ ದೇಶಗಳ ಬೋಧಕ ಸಿಬ್ಬಂದಿ ಹಾಗೂ ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ಪ್ರಕಟವಾಗುವ ಸಂಶೋಧನಾ ಲೇಖನಗಳ ಪ್ರಮಾಣವನ್ನು ಈ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.
115ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು:ಅಜ್ಮಾನ್‌ನಲ್ಲಿರುವ GMU ಕ್ಯಾಂಪಸ್‌ನಲ್ಲಿ ಪ್ರಸ್ತುತ 115ಕ್ಕೂ ಹೆಚ್ಚು ರಾಷ್ಟ್ರೀಯತೆಗಳ ವಿದ್ಯಾರ್ಥಿಗಳು ಹಾಗೂ 56 ದೇಶಗಳ ಬೋಧಕ ಸಿಬ್ಬಂದಿ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತುಂಬೆ ಗ್ರೂಪ್‌ನ ಶೈಕ್ಷಣಿಕ ಆಸ್ಪತ್ರೆಗಳು ಹಾಗೂ ಜಾಗತಿಕ ಸಂಶೋಧನಾ ಸಹಭಾಗಿತ್ವಗಳ ಮೂಲಕ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ತರಬೇತಿ ಮತ್ತು ಅನುಭವ ಒದಗಿಸಲಾಗುತ್ತಿದೆ.
ಗುಣಮಟ್ಟ ಭರವಸೆ ಮತ್ತು ಸಾಂಸ್ಥಿಕ ಪರಿಣಾಮಕಾರಿತ್ವ ವಿಭಾಗದ ಡೀನ್ ಪ್ರೊ. ಅಮ್ಮಾರ್ ಅಲ್‌ಮಾಯ್ತಾ ಮಾತನಾಡಿ, 99.4 ಅಂಕ ಆಕಸ್ಮಿಕ ಸಾಧನೆಯಲ್ಲ. ವಿಶ್ವದ ವಿವಿಧ ಭಾಗಗಳಿಂದ ಪ್ರತಿಭಾವಂತರನ್ನು ಆಕರ್ಷಿಸುವುದು, ಅಂತಾರಾಷ್ಟ್ರೀಯ ಸಂಶೋಧನಾ ಸಹಯೋಗಗಳನ್ನು ಬೆಳೆಸುವುದು ಮತ್ತು ಜಾಗತಿಕ ಗುಣಮಟ್ಟವನ್ನು ಅಳವಡಿಸಿಕೊಳ್ಳುವ ನಿರಂತರ ಪ್ರಯತ್ನದ ಫಲಿತಾಂಶವಾಗಿದೆ ಎಂದು ಹೇಳಿದರು.