ಇಂದಿನಿಂದ ಗೂಳೂರು ಗಣೇಶ ವಿಸರ್ಜನಾ ಮಹೋತ್ಸವ

KannadaprabhaNewsNetwork |  
Published : Nov 22, 2025, 01:30 AM IST
್ಿ್ಿ್ಿ | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ದ ಗೂಳೂರು ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ ನ. 22 ಮತ್ತು 23 ರಂದು ಅತ್ಯಂತ ವೈಭವಯುತವಾಗಿ ನಡೆಯಲಿದೆ ಎಂದು ಗೂಳೂರು ಶ್ರೀ ಮಹಾಗಣಪತಿ ಭಕ್ತ ಮಂಡಳಿಯ ಅಧ್ಯಕ್ಷರಾದ ಜಿ.ಎಸ್. ಶಿವಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಇತಿಹಾಸ ಪ್ರಸಿದ್ದ ಗೂಳೂರು ಗಣೇಶಮೂರ್ತಿಯ ವಿಸರ್ಜನಾ ಮಹೋತ್ಸವ ನ. 22 ಮತ್ತು 23 ರಂದು ಅತ್ಯಂತ ವೈಭವಯುತವಾಗಿ ನಡೆಯಲಿದೆ ಎಂದು ಗೂಳೂರು ಶ್ರೀ ಮಹಾಗಣಪತಿ ಭಕ್ತ ಮಂಡಳಿಯ ಅಧ್ಯಕ್ಷರಾದ ಜಿ.ಎಸ್. ಶಿವಕುಮಾರ್ ತಿಳಿಸಿದ್ದಾರೆ.ಬಲಿಪಾಢ್ಯಮಿಯ ದಿನ ಸ್ಥಾಪಿಸಲಾಗುವ ಗಣೇಶಮೂರ್ತಿಗೆ ಕಾರ್ತಿಕ ಮಾಸದಲ್ಲಿ 1 ತಿಂಗಳ ಕಾಲ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೃಹತ್ ಗಣೇಶ ಮೂರ್ತಿಗೆ ವಿಶೇಷ ಐತಿಹ್ಯವಿದ್ದು, 1 ತಿಂಗಳ ಕಾಲ ಗ್ರಾಮದ ಪ್ರತಿಯೊಂದು ಮನೆಯವರು ನಿತ್ಯ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವರು. ಪ್ರತಿದಿನ ರಾತ್ರಿ ೯ ಗಂಟೆಗೆ ಮಹಾಮಂಗಳಾರತಿ ನಡೆದಿದ್ದು, ೧೮ ಕೋಮಿನವರು ಗೂಳೂರು ಗಣಪನಿಗೆ ವಿವಿಧ ಸೇವೆ ಸಲ್ಲಿಸಿ, ವಿಸರ್ಜನೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ ಎಂದರು.ನ. 22 ರಂದು ಶನಿವಾರ ರಾತ್ರಿ 10 ಗಂಟೆಗೆ ವಿದ್ಯುತ್ ಅಲಂಕಾರ ಮತ್ತು ಹೂವಿನಿಂದ ಅಲಂಕೃತಗೊಂಡ ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಶ್ರೀ ಮಹಾಗಣಪತಿ ಉತ್ಸವವನ್ನು ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲ್, ಕೇರಳದ ಜಾನಪದ ನೃತ್ಯ, ಮಂಡ್ಯದ ಕಲಾ ತಂಡದಿಂದ ಕರಡಿ ವಾದ್ಯ, ನಾಸಿಕ್ ಡೋಲ್, ಮಹಿಳಾ,ಪುರುಷ ವೀರಗಾಸೆ ತಂಡಗಳು, ಕೀಲುಕುದುರೆ, ನಂದಿಕೋಲು, ನವಿಲು, ಜಿರಾಫೆ, ಕವಾಡ ನೃತ್ಯ, ಹಾಸ್ಯದ ಚಾರ್ಲಿ ನೃತ್ಯ, ವೀರಭದ್ರ ದೇವರ ಕುಣಿತ, ವೀರಗಾಸೆ, ಡೊಳ್ಳು, ಪೂಜಾ ಕುಣಿತದ ಪ್ರದರ್ಶನದೊಂದಿಗೆ ಗೂಳೂರಿನ ಪ್ರಮುಖ ರಾಜಬೀದಿಗಳಲ್ಲಿ ಗಣಪತಿಯ ಉತ್ಸವ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಗೂಳೂರಿನ ಪಾರ್ಥಸಾರಥಿ ಅವರಿಂದ ಚಿತ್ರದುರ್ಗದ ಮದಕರಿ ನಾಯಕನ ವೇಷ ಹಾಗೂ ಕುಮಟನಾಯಕ ರವರ ಕುಟುಂಬದಿಂದ ಪಾಳೇಗಾರರ ವೇಷದ ಪ್ರದರ್ಶನ ನಡೆಯಲಿದೆ ಎಂದರು.ನ. 23 ರ ಭಾನುವಾರ ಮಧ್ಯಾಹ್ನದಿಂದ ಗ್ರಾಮದ ಮಧ್ಯಭಾಗದಿಂದ ಶ್ರೀ ಮಹಾಗಣಪತಿಯ ಉತ್ಸವ ಆರಂಭಗೊಂಡು ಸಂಜೆ ೫ ಗಂಟೆಯವರೆಗೆ ಗ್ರಾಮದಲ್ಲಿ ಮೆರವಣಿಗೆ ನಡಸಿ, ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಗೂಳೂರು ಕೆರೆಯಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ಮಾಡಲಾಗುವುದು. ವಿಸರ್ಜನೆ ವೇಳೆ ನುರಿತ ಸಿಡಿಮದ್ದು ಸಿಡಿಸುವ ಕೆಲಸಗಾರರಿಂದ ೫೦೦ ಅಡಿ ಉದ್ದದ ಜೋಗ್ ಪಾಲ್ಸ್, ನೂರು ಬಾರಿ ಒಡೆಯುವ ಔಟ್ಸ್ ಹಾಗೂ ಪ್ಯಾರಚೂಟ್‌ಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.ಗ್ರಾಮಸ್ಥರು, ದಾನಿಗಳ ಸಹಕಾರದಿಂದ ಒಂದು ತಿಂಗಳ ಕಾಲ ಪೂಜಿಸಲಾದ ಗಣಪತಿಯ ವಿಸರ್ಜನಾ ಮಹೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರಲ್ಲದೆ, ಹೊರ ರಾಜ್ಯದ ಭಕ್ತರು ಪಾಲ್ಗೊಳ್ಳುವುದು ವಾಡಿಕೆ.ನ. 24 ರಂದು ಶ್ರೀ ಮಹಾಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 11 ಗಂಟೆ ಶ್ರೀ ಮಹಾಗಣಪತಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ನಲ್ಲತಂಗಿ ಎಂಬ ಪೌರಾಣಿಕ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಗಣಪತಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

PREV

Recommended Stories

ಉತ್ತಮ ಸಂಸ್ಕಾರ ಇಲ್ಲದವರ ಜೀವನದಲ್ಲಿ ಸುಖವಿರಲ್ಲ
ಮಧುಗಿರಿ ವಿವಿಧೆಡೆ ಉಪಲೋಕಾಯುಕ್ತರ ಭೇಟಿ