೨೦ ದಿನಗಳಿಂದ ಗುಂಡ್ಲುಪೇಟೆ ಆಹಾರ ಕಚೇರಿಗೆ ಬೀಗ!

KannadaprabhaNewsNetwork | Published : Sep 30, 2024 1:19 AM

ಸಾರಾಂಶ

ಗುಂಡ್ಲುಪೇಟೆ: ಇಲ್ಲಿನ ಆಹಾರ ಇಲಾಖೆಯ ಶಿರಸ್ತೇದಾರ್‌, ಇಬ್ಬರು ಆಹಾರ ನಿರೀಕ್ಷಕರು ಇಲ್ಲದೆ ೨೦ ದಿನಗಳಾಗುತ್ತಿದೆ. ಕಳೆದ ೨೦ ದಿನಗಳಿಂದಲೂ ಆಹಾರ ಇಲಾಖೆಯ ಕಚೇರಿಗೆ ಬೀಗ ಬಿದ್ದಿದೆ!.

ಗುಂಡ್ಲುಪೇಟೆ: ಇಲ್ಲಿನ ಆಹಾರ ಇಲಾಖೆಯ ಶಿರಸ್ತೇದಾರ್‌, ಇಬ್ಬರು ಆಹಾರ ನಿರೀಕ್ಷಕರು ಇಲ್ಲದೆ ೨೦ ದಿನಗಳಾಗುತ್ತಿದೆ. ಕಳೆದ ೨೦ ದಿನಗಳಿಂದಲೂ ಆಹಾರ ಇಲಾಖೆಯ ಕಚೇರಿಗೆ ಬೀಗ ಬಿದ್ದಿದೆ!.

ಪಟ್ಟಣದ ತಾಲೂಕು ಕಚೇರಿ ಕಟ್ಟಡದ ೩೬ ನಂಬರ್‌ ಕೊಠಡಿಯೀಗ ಕಳೆದ ೨೦ದಿನಗಳಿಂದ ಬೀಗ ಬಿದ್ದಿರುವ ಕಾರಣ ಆಹಾರ ಇಲಾಖೆಯ ಕೆಲಸಕ್ಕೆ ಬರುವ ಸಾರ್ವಜನಿಕರು, ಪಡಿತರ ವಿತರಕರು ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ತೆರಳುತ್ತಿದ್ದಾರೆ. ಕಳೆದ ಜೂ.೨೮ ರಂದು ತಾಲೂಕಿನ ಹಂಗಳ ಗ್ರಾಮದಲ್ಲಿ ಜನ ಸಂಪರ್ಕ ಸಭೆ ಮುಗಿಸಿ ವಾಪಸ್‌ ಬರುವಾಗ ರಸ್ತೆ ಅಪಘಾತದಲ್ಲಿ ಆಹಾರ ನಿರೀಕ್ಷಕ ನಾಗೇಂದ್ರ ಸಾವನ್ನಪ್ಪಿದರು. ಬೈಕ್‌ ಹಿಂಬದಿ ಕುಳಿತಿದ್ದ ಆಹಾರ ಶಿರಸ್ತೇದಾರ್‌ ಕೆ.ಎಸ್.ರಮೇಶ್‌ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ ಕೋಮಾದಲ್ಲಿದ್ದಾರೆ. ಅಂದಿನಿಂದ ಇಂದಿನ ತನಕ ಆಹಾರ ಶಿರಸ್ತೇದಾರ್‌, ಆಹಾರ ನಿರೀಕ್ಷಕರ ಹುದ್ದೆ ಖಾಲಿ ಬಿದ್ದಿದೆ.

ಕಳೆದ ಸೆ.೧೦ ರಿಂದ ಆಹಾರ ನಿರೀಕ್ಷಕ ಪೂರ್ಣಿಮ ಕೂಡ ಹೆರಿಗೆ ರಜೆ ಮೇಲೆ ತೆರಳಿದ್ದಾರೆ. ಇದ್ದ ಒಬ್ಬರು ಆಹಾರ ನಿರೀಕ್ಷಕರು ರಜೆ ಮೇಲೆ ತೆರಳಿದ ಬಳಿಕ ಇಡೀ ಆಹಾರ ಇಲಾಖೆಯಲ್ಲಿ ಇರಬೇಕಾದ ಆಹಾರ ಶಿರಸ್ತೇದಾರ್‌, ಇಬ್ಬರು ಆಹಾರ ನಿರೀಕ್ಷಕರು ಇಲ್ಲದೆ ಆಹಾರ ಇಲಾಖೆಗೆ ಬೀಗ ಬಿದ್ದು ೨೦ ದಿನಗಳು ಕಳೆದಿದೆ. ಆಹಾರ ಶಿರಸ್ತೇದಾರ್‌ ಇಲ್ಲ, ಇಬ್ಬರು ಆಹಾರ ನಿರೀಕ್ಷಕರು ಇಲ್ಲ ಜೊತೆಗೆ ಆಹಾರ ಇಲಾಖೆ ಎಸ್‌ಡಿಎ ಕೂಡ ಇಲ್ಲ. ಈ ನಡುವೆ ಗುಂಡ್ಲುಪೇಟೆಯ ಆಹಾರ ಇಲಾಖೆ ಕಚೇರಿ ಪಾಳು ಬಿದ್ದಿದೆ!. ಶಾಲಾ, ಕಾಲೇಜಿಗೆ ಹಾಗೂ ಆಸ್ಪತ್ರೆಗೆ ತುರ್ತಾಗಿ ಪಡಿತರ ಚೀಟಿಗೆ ಹೆಸರು ಸೇರಿಸಲು ಆಹಾರ ಇಲಾಖೆಯೇ ಇಲ್ಲದಿರುವಾಗ ಇನ್ನೆಲ್ಲಿ ಆಹಾರ ಇಲಾಖೆಯಲ್ಲಿ ಕೆಲಸ ಎಂದು ಪಡಿತರ ವಿತರಕರೇ ಅಲವತ್ತುಕೊಂಡಿದ್ದಾರೆ. ಪೋಟರಿ ಬಲಿಟಿಯಡಿ ಪಡಿತರ ವಿತರಿಸಲು ಆಗುತ್ತಿಲ್ಲ. ಪೋರ್ಟಿಬಲಿಟಿಗೆ ಆಹಾರ ಇಲಾಖೆಯ ಶಿರಸ್ತೇದಾರ್‌ ಅಥವಾ ಆಹಾರ ನಿರೀಕ್ಷಕರು ಲಾಗಿನ್‌ ಕೊಡಬೇಕು. ಲಾಗಿನ್‌ ಕೊಡಲು ಅಧಿಕಾರಿಗಳೇ ಇಲ್ಲ. ಹಾಗಾಗಿ ಪೋರ್ಟಿಬಲಿಟಿಯಲ್ಲಿ ಕಾಯುವ ಮಂದಿಗೆ ಈ ತಿಂಗಳು ಪಡಿತರ ಸಿಗುತ್ತಿಲ್ಲ ಎನ್ನಲಾಗಿದೆ.

ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ ಅವರು ಗುಂಡ್ಲುಪೇಟೆ ಆಹಾರ ಇಲಾಖೆಗೆ ಚಾಮರಾಜನಗರದ ಆಹಾರ ಶಿರಸ್ತೇದಾರ್‌ ಮಹೇಶ್‌ರನ್ನು ನಿಯೋಜಿಸಿದ್ದರು. ಅವರು ಬರಲಿಲ್ಲ. ನಂತರ ಆಹಾರ ಇಲಾಖೆಯೇ ನಂಜನಗೂಡು ಆಹಾರ ಶಿರಸ್ತೇದಾರ್‌ ಅರವಿಂದರನ್ನು ನೇಮಿಸಿತ್ತು. ಅವರೂ ತಾಂತ್ರಿಕ ಕಾರಣದಿಂದ ಬಂದಿಲ್ಲ. ಇದೀಗ ಕೊಳ್ಳೇಗಾಲ ಆಹಾರ ಇಲಾಖೆ ನಿರೀಕ್ಷಕ ಪ್ರಸಾದ್‌ರನ್ನು ನಿಯೋಜನೆ ಮಾಡಲಾಗಿದೆ ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಹೇಳಿದ್ದಾರೆ.ಇಲ್ಲಿನ ಆಹಾರ ಶಿರಸ್ತೇದಾರ್‌ ರಸ್ತೆ ಅಪಘಾತದಲ್ಲಿ ಗಾಯಗೊಂಡು ರಜೆ ಮೇಲಿದ್ದರೆ, ಆಹಾರ ನಿರೀಕ್ಷಕರೊಬ್ಬರು ಸಾವನ್ನಪ್ಪಿದ ಕಾರಣ ೨ ಹುದ್ದೆ ಖಾಲಿಯಿದೆ. ಕಳೆದ ೨೦ ದಿನಗಳಿಂದ ಆಹಾರ ನಿರೀಕ್ಷಕರೊಬ್ಬರು ಹೆರಿಗೆ ರಜೆ ಮೇಲೆ ತೆರಳಿದ್ದಾರೆ. ಈಗ ಆಹಾರ ನಿರೀಕ್ಷಕ ಪ್ರಸಾದ್‌ ನಿಯೋಜನೆ ಗೊಂಡಿದ್ದಾರೆ.

-ಟಿ.ರಮೇಶ್‌ ಬಾಬು, ತಹಸೀಲ್ದಾರ್

Share this article