ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮನಿಗೆ ಪೂಜೆ ಸಲ್ಲಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಹನುಮ ಜಯಂತಿ ಆಚರಣಾ ಸಮಿತಿ ಸದಸ್ಯರು ಪ್ರತಿಭಟನೆ ಆರಂಭಿಸಿದರು. ರಸ್ತೆಯುದ್ದಕ್ಕೂ ಕಾಂಗ್ರೆಸ್ ಸರ್ಕಾರ, ಸ್ಥಳೀಯ ಶಾಸಕ ಎಚ್. ಎಂ. ಗಣೇಶ್ ಪ್ರಸಾದ್ ಹಾಗೂ ಪೊಲೀಸರು ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕಾರ್ಯಕರ್ತರು ಮೊಳಗಿಸಿದತು. ಜೈ ಹನುಮಾನ್, ವಂದೇ ಮಾತರಂ ಜಯ ಘೋಷಗಳನ್ನು ಕೂಗುತ್ತಿದ್ದರು.
ಎಂಸಿ ಡಿಸಿಸಿ ಬ್ಯಾಂಕ್ ವೃತ್ತದ ಬಳಿ ಪ್ರತಿಭಟನಾಕಾರರು ಬಂದಾಗ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಹಾಕಿ ತಡೆದರು.ಆ ಸಮಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ರಸ್ತೆಗೆ ಏಕೆ ಅಡ್ಡ ಹಾಕಿದ್ದೀರಾ? ಎಂದು ಎಎಸ್‌ಪಿ ಶಶಿಧರ್ ಹಾಗೂ ಡಿವೈಎಸ್ಪಿ ಸ್ನೇಹರಾಜ್‌ರನ್ನು ಪ್ರಶ್ನಿಸಿ, ಪ್ರತಿಭಟನೆಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು.ಎಎಸ್ಪಿ ಶಶಿಧರ್ ಹಾಗೂ ಡಿವೈಎಸ್ಪಿ ಸ್ನೇಹರಾಜ್ ಬಿಜೆಪಿ ಮುಖಂಡ ಪ್ರಣಯ್ ಮನವೊಲಿಸಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವಾಪಸ್ ತೆರಳಿ ಎಂದು ಹೇಳಿದಾಗ ಪ್ರತಿಭಟನಾಕಾರರು ಸಾರಿಗೆ ಬಸ್ ನಿಲ್ದಾಣದ ಮೂಲಕ ವಾಪಸ್ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಮುಖಂಡ ಪ್ರಣಯ್, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್, ವಕೀಲ ನಂದೀಶ್,ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಎನ್.ಮಲ್ಲೇಶ್ ಮಾತನಾಡಿ ಸ್ಥಳೀಯ ಪೊಲೀಸರು ಶಾಸಕರ ಕೈಗೊಂಬೆಯಂತೆ ನಡೆದುಕೊಂಡು ಹಿಂದೂ ಕಾರ್ಯಕರ್ತರ ಮೇಲೆ ದುರುದ್ದೇಶದಿಂಧ ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಸ್ಥಳೀಯ ಶಾಸಕ ಎಚ್. ಎಂ. ಗಣೇಶ್ ಪ್ರಸಾದ್ ಹನುಮೋತ್ಸವಕ್ಕೆ ಬೆಂಬಲಿಸಿ, ಪೋಸ್ಟರ್ ಬಿಡುಗಡೆಗೊಳಿಸಿ, ಹನುಮ ಜಯಂತಿ ಆಚರಣಾ ಸಮಿತಿಗೆ ಹಣ ಕೊಡುತ್ತೇನೆ ಎಂದು ಹೇಳಿದ ಬಳಿಕ ಹಣ ಕೊಡಲಿಲ್ಲ. ಹಣ ಕೊಡದಿದ್ರೂ ಪರವಾಗಿಲ್ಲ ಹನುಮ ಜಯಂತಿಗೆ ಹೋಗಬೇಡಿ ಎಂದು ಕಾಂಗ್ರೆಸ್ಸಿಗರಿಗೆ ಹೇಳುವ ಮೂಲಕ ಹಿಂದೂ ವಿರೋಧಿಯಾಗಿದ್ದಾರೆ ಎಂದರು.
ಪಟ್ಟಣದಲ್ಲಿ ಇತ್ತೀಚಗೆ ನಡೆದ ಹನುಮ ಜಯಂತಿ ಶಾಂತವಾಗಿ ಹಾಗೂ ಯಶಸ್ವಿಯಾಗಿ ನಡೆದ ಬಳಿಕ ಹಿಂದೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಲು ಶಾಸಕರು ಒತ್ತಡ ಹೇರಿದ್ದಾರೆ.ಶಾಸಕರ ಕೈ ಗೊಂಬೆಯಾಗಿ ಪೊಲೀಸರು ಕೆಲಸ ಮಾಡಿದ್ದಾರೆ ಇದು ಸರೀನಾ ಎಂದು ಸರ್ಕಾರ ಹಾಗೂ ಸ್ಥಳೀಯ ಶಾಸಕರನ್ನು ಪ್ರಶ್ನಿಸಿದರು.ಪೊಲೀಸರನ್ನು ಬಳಸಿಕೊಂಡು ಶಾಸಕರು ಆಡಳಿತ ನಡೆಸಿ ವಿಪಕ್ಷ ಹಾಗೂ ಪ್ರಶ್ನಿಸಿದವರ ಮೇಲೆ ಕೇಸು ದಾಖಲಿಸುತ್ತಿದ್ದಾರೆ ಇದು ಅವರ ಅಸಾಯಕತೆ ತೋರುತ್ತದೆ.ನಾವಂತು ಇಂಥ ಕೇಸುಗಳಿಗೆ ಹೆದರುವುದಿಲ್ಲ.
ಪ್ರತಿಭಟನೆಯಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಸಿ.ಮಹದೇವಪ್ರಸಾದ್,ಮಾಜಿ ಅಧ್ಯಕ್ಷ ಡಿ.ಪಿ.ಜಗದೀಶ್,ಚಾಮುಲ್ ಮಾಜಿ ನಿರ್ದೇಶಕ ಕನ್ನೇಗಾಲಸ್ವಾಮಿ,ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನಮಲ್ಲೀಪುರ ಬಸವಣ್ಣ,ಪುರಸಭೆ ಮಾಜಿ ಸದಸ್ಯ ನಾಗೇಶ್,ಬಿಜೆಪಿ ಮುಖಂಡರಾದ ಡಾ.ನವೀನ್ ಮೌರ್ಯ,ಬಸವರಾಜು,ಮಂಜುನಾಥ್,ಹಿರೀಕಾಟಿ ಸೋಮಶೇಖರ್,ಮಲೆಯೂರು ನಾಗೇಂದ್ರ,ಕಲ್ಲಹಳ್ಳಿ ಮಹೇಶ್,ಮಾರ್ಕೆಟ್ ಶಶಿ,ಸುನೀಲ್,ಮಹದೇವಶೆಟ್ಟಿ,ಮಂಜು,ಬೇಗೂರು ಅಣ್ಣಯ್ಯ,ವಾಟಾಳ್ ಶಿವಾನಂದ ಸೇರಿದಂತೆ ನೂರಾರು ಮಂದಿ ಇದ್ದರು.