ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ನಡುವೆ ಮೈಸೂರು-ಊಟಿ ಹೆದ್ದಾರಿ ಹಾಗೂ ಚಾಮರಾಜನಗರ ರಸ್ತೆ ಜೋಡಿ ರಸ್ತೆ ಬದಿಯಲ್ಲಿ ಸರ್ವೀಸ್ ರಸ್ತೆ ಇರದ ಕಾರಣ ಪಾದಚಾರಿಗಳು ಹೆದ್ದಾರಿಯೇ ಫುಟ್‌ಪಾತ್ ಎಂದು ನಡೆದುಕೊಂಡು ಹೋಗುತ್ತಿದ್ದಾರೆ. ಹೆದ್ದಾರಿ ಬದಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು ನಡೆದು ಹೋಗುವ ಹೆದ್ದಾರಿಯಲ್ಲಿ ಬೀಡಾಡಿ ದನ, ಕರುಗಳು ದಿಢೀರ್ ನುಗ್ಗುವ ಕಾರಣ ಅನಾಹುತಕ್ಕೆ ಎಡೆಮಾಡಿದೆ. ಕಳೆದ ತಿಂಗಳ ಹಿಂದೆ ಪಟ್ಟಣದ ಕೇರಳ ಹೆದ್ದಾರಿಯಲ್ಲಿ ಹಸುವೊಂದು ದಿಢೀರ್ ರಸ್ತೆಗೆ ನುಗ್ಗಿದ ಕಾರಣ ಬೈಕ್ ಸವಾರ ಬಿದ್ದು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಆತನ ಪ್ರಾಣ ಉಳಿಯಿತು.
ಎಚ್ಚೆತ್ತುಕೊಳ್ಳಲಿ: ಪಟ್ಟಣದಲ್ಲಿ ಬೀಡಾಡಿ ದನಗಳ ಅಡ್ಡಾದಿಡ್ಡಿ ಓಡಾಟದಲ್ಲಿ ದಿಢೀರ್ ರಸ್ತೆಗೆ ನುಗ್ಗವ ಕಾರಣ ವಾಹನಗಳ ಸವಾರರ ಅಪಘಾತ ನಡೆವ ಸಂಭವ ಕೂಡ ಹೆಚ್ಚಿದೆ, ಪುರಸಭೆ ಹಾಗೂ ಪೊಲೀಸರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಶಾಲಾ ಕಾಲೇಜಿನ ಮಕ್ಕಳು ಸಂಚರಿಸುವ ಸಮಯದಲ್ಲಿ ಬೀಡಾಡಿ ದನಗಳ ತಪ್ಪಿಸಿಕೊಳ್ಳಲು ಹೋಗಿ ವಾಹನಗಳು ಬಂದು ಅಪಘಾತವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.ಪಟ್ಟಣದ ಪರಿಮಿತಿಯ ಮೈಸೂರು-ಊಟಿ ಹೆದ್ದಾರಿ ರಸ್ತೆಯ ಮಧ್ಯಭಾಗದಲ್ಲಿ (ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಎಂಸಿಡಿಸಿಸಿ ಬ್ಯಾಂಕ್ ವೃತ್ತ, ಗುರುಭವನ, ಪುರಸಭೆ ಕಚೇರಿ ಮುಂದೆ ದನ, ಕರುಗಳು ಮಲಗುತ್ತಿವೆ, ಕೆಲವೊಮ್ಮೆ ದಿಢೀರ್ ರಸ್ತೆಯ ಅತ್ತಿಂದತ್ತ ಓಡುವಾಗ ವಾಹನಗಳ ಸವಾರರು ಬ್ರೇಕ್ ಹಾಕಿದಾಗ ಹಿಂಬದಿ ವಾಹನಗಳು ಡಿಕ್ಕಿ ಹೊಡೆಯುತ್ತವೆ ಎಂದು ಕಾರು ಚಾಲಕ ಮಹದೇವ ಹೇಳಿದ್ದಾರೆ.ಬೀಡಾಡಿ ದನ, ಕರುಗಳನ್ನು ಕೆಲ ಪಶು ಪೋಷಕರು ಬೇಕಂತಲೇ ಬಿಟ್ಟು ಬಿಡುತ್ತಿದ್ದಾರೆ. ಪಟ್ಟಣದಲ್ಲಿ ಅಡ್ಡಾಡಿಕೊಂಡು ಹಾಲು ಕರೆವ ವೇಳೆಗೆ ಮನೆಗೆ ತಲುಪುತ್ತಿವೆ. ಇದನ್ನು ತಪ್ಪಿಸಲು ಪುರಸಭೆ ಕ್ರಮ ಜರುಗಿಸಿದರೆ ಬೀಡಾಡಿ ದನ, ಕರುಗಳ ಹಾವಳಿಗೆ ಬ್ರೇಕ್ ಹಾಕಲು ಸಾಧ್ಯ ಎಂದು ಪಟ್ಟಣದ ನಿವಾಸಿ ಮಹೇಶ್ ಹೇಳಿದ್ದಾರೆ.
ಪಟ್ಟಣದಲ್ಲಿ ಬೀಡಾಡಿ ದನಗಳನ್ನು ಎಲ್ಲೆಂದರಲ್ಲಿ ನಿಲ್ಲುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಪತ್ರ ಬರೆಯಲಾಗಿದೆ. ಮತ್ತೆ ಪತ್ರ ಬರೆದು ಪೊಲೀಸರ ಸಹಕಾರದಲ್ಲಿ ಬೀಡಾಡಿ ದನಗಳ ಹಿಡಿದು ಪಿಂಜರಾ ಪೋಲ್‌ಗೆ ಕಳುಹಿಸಲು ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.-ಕೆ.ಪಿ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ
ಕಳೆದ ಕೆಲ ತಿಂಗಳ ಹಿಂದೆ ಬೀಡಾಡಿ ದನಗಳ ಹಿಡಿದು ದಂಡ ಹಾಕಿದ್ದ ಪುರಸಭೆ ಮತ್ತೆ ಕೈ ಚೆಲ್ಲಿ ಕುಳಿತಿದೆ. ಪಟ್ಟಣದೊಳಗೆ ಮೈಸೂರು-ಊಟಿ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಇದೆ. ದನಗಳು ದಿಢೀರ್ ರಸ್ತೆಗೆ ನುಗ್ಗುವುದರಿಂದ ಅಪಘಾತಗಳಿಗೆ ಕಾರಣವಾಗಲಿದೆ.-ಪ್ರಸನ್ನ, ಗುಂಡ್ಲುಪೇಟೆ ಟೌನ್