ಕಸ್ತೂರಿ ರಂಗನ್ ವರದಿ ವಿರೋಧಿಸಿ ನ.15ರಂದು ಗುಂಡ್ಯ- ಸುಬ್ರಹ್ಮಣ್ಯ ಹೆದ್ದಾರಿ ಬಂದ್

KannadaprabhaNewsNetwork |  
Published : Oct 27, 2024, 02:41 AM IST
ಕಸ್ತೂರಿ ರಂಗನ್ ವರದಿಯ ವಿರುದ್ದ ಕುಟ್ರುಪಾಡಿಯಲ್ಲಿ ಪ್ರತಿಭಟನೆ | Kannada Prabha

ಸಾರಾಂಶ

ಪ್ರತಿಭಟನೆ ಬಳಿಕ ಕುಟ್ರುಪ್ಪಾಡಿ ಗ್ರಾಪಂ ಪಿಡಿಒ ಆನಂದ ಗೌಡ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಹಲವು ವರ್ಷಗಳಿಂದ ತಾರ್ಕಿಕ ಅಂತ್ಯ ಕಾಣದ ಕಸ್ತೂರಿ ರಂಗನ್ ವರದಿಯ ವಿರುದ್ಧ ನವೆಂಬರ್‌ ೧೫ಕ್ಕೆ ಸುಮಾರು ೫೦ ಸಾವಿರ ಜನರನ್ನು ಸೇರಿಸಿ ಸುಬ್ರಹ್ಮಣ್ಯದಲ್ಲಿ ಗುಂಡ್ಯ- ಸುಬ್ರಹ್ಮಣ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ಜನಹಿತ ರಕ್ಷಣೆ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.

ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಶುಕ್ರವಾರ, ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಅರಣ್ಯ ಭೂಮಿಗಳನ್ನು ಜಂಟಿ ಸರ್ವೆ ಮಾಡುವುದು, ಪಶ್ಚಿಮಘಟ್ಟ ಪ್ರದೇಶಕ್ಕೆ ಗಡಿ ಗುರುತು ಮಾಡುವುದು ಮತ್ತು ಅರಣ್ಯ ಭೂಮಿಗಳಿಗೆ ಬಫರ್ ಜೋನ್ ಇಡಬಾರದು ಇಷ್ಟು ಅಂಶಗಳನ್ನು ಸರ್ಕಾರ ಮಾಡಿದರೆ ಯಾವ ಅರಣ್ಯ ರಕ್ಷಣೆಯ ವರದಿಗೂ ರೈತರು ಭಯಪಡಬೇಕಿಲ್ಲ. ಪ್ರಸ್ತುತ ಕಸ್ತೂರಿರಂಗನ್ ವರದಿಗೆ ನಮ್ಮ ವಿರೋಧವಿದೆ, ಪರಿಸರ ರಕ್ಷಣೆಗೆ ವಿರೋಧವಿಲ್ಲ, ಆದರೆ ಪರಿಸರ ಸಂರಕ್ಷಣೆಯ ನೆಪದಲ್ಲಿ ಜನರಿಗೆ ತೊಂದರೆ ಉಂಟು ಮಾಡುವುದನ್ನು ಸಹಿಸುವುದಿಲ್ಲ ಎಂದರು.

ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಸುಪ್ರೀಂ ಕೋರ್ಟ್ ಆದೇಶವಲ್ಲ, ಇದು ಹಸಿರು ಪೀಠದ ಆದೇಶವಾಗಿದೆ, ಇದು ಅನುಷ್ಠಾನ ಆಗಿಯೇ ಆಗುತ್ತದೆ ಎಂಬುದಾಗಿ ಜನರನ್ನು ನಂಬಿಸಲಾಗುತ್ತಿದೆ, ಆದರೇ ಜನರು ಸರಿಯಾಗಿ ಹೋರಾಟ ಮಾಡಿದರೆ ಈ ವರದಿಯ ಜಾರಿ ಸಾಧ್ಯವಿಲ್ಲ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್, ಕುಟ್ರುಪಾಡಿ ಗ್ರಾ.ಪಂ. ಮಾಜಿ ಸದಸ್ಯ ಮ್ಯಾಥ್ಯು ಟಿ.ಎಂ. ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕುಟ್ರುಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಮನ, ಬಲ್ಯ ಗ್ರಾಮ ಸಮಿತಿಯ ಅಧ್ಯಕ್ಷ ಯೋಗೀಂದ್ರ ಉಪಸ್ಥಿತರಿದ್ದರು. ಕಡಬ ತಾಲೂಕು ಸಮಿತಿ ಸದಸ್ಯ ಧನಂಜಯ ಕೊಡಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಟ್ರುಪ್ಪಾಡಿ ಗ್ರಾ.ಪಂ ಸದಸ್ಯ ಮಹಮ್ಮದ್ ಆಲಿ ಸ್ವಾಗತಿಸಿದರು, ಬಲ್ಯ ಗ್ರಾಮ ಸಮಿತಿಯ ಸಹ ಸಂಚಾಲಕ ಅಚ್ಯುತ ದೇರಾಜೆ ವಂದಿಸಿದರು. ಪ್ರತಿಭಟನೆ ಬಳಿಕ ಕುಟ್ರುಪ್ಪಾಡಿ ಗ್ರಾಪಂ ಪಿಡಿಒ ಆನಂದ ಗೌಡ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ