ಬಂಟ್ವಾಳ: ತಿಂಗಳಿಗೆ ಬರುತ್ತಿದ್ದ 2 ಸಾವಿರ ರು.. ಅಷ್ಟೇನೂ ದೊಡ್ಡ ಮೊತ್ತವಲ್ಲ. ಆದರೆ ಅದನ್ನು ಖರ್ಚು ಮಾಡದೆ, ಮೂರು ವರ್ಷಗಳ ಕಾಲ ಕೂಡಿಟ್ಟಾಗ ಅದೇ ಹಣ ಒಂದು ಕನಸಿಗೆ ಬುನಾದಿಯಾಯಿತು. ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಶಕುಂತಳಾ ಅವರ ಪಾಲಿಗೆ ‘ಗೃಹಲಕ್ಷ್ಮಿ’ ಹಣ ಸ್ವಾವಲಂಬನೆಯ ದಾರಿಗೆ ಬೆಳಕಾಯಿತು.+
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಗುರುವಾರ ಮಳಿಗೆಯ ಶುಭಾರಂಭ ನಡೆಯಿತು. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೇವಲ ದಿನನಿತ್ಯದ ಖರ್ಚಿಗೆ ಬಳಸದೆ, ಅದನ್ನೇ ಹೂಡಿಕೆಯಾಗಿ ಪರಿವರ್ತಿಸಿ ಸ್ವಾವಲಂಬನೆಯ ಹೆಜ್ಜೆ ಇಟ್ಟಿರುವ ಶಕುಂತಳಾ ಅವರ ಪ್ರಯತ್ನ ಗಮನ ಸೆಳೆಯಿತು.ಮಳಿಗೆಗೆ ಭೇಟಿ ನೀಡಿದ ಬಂಟ್ವಾಳ ತಾಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ ಅವರು ಶಕುಂತಳಾ ಅವರನ್ನು ಅಭಿನಂದಿಸಿದರು.
‘ಶಕುಂತಳಾ ಅವರ ಸಾಧನೆ ಇತರ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದು, ಮಹಿಳಾ ಸ್ವಾವಲಂಬನೆಗೆ ಪ್ರೇರಣಾದಾಯಕವಾಗಿದೆ,’ ಎಂದು ಜಯಂತಿ ವಿ. ಪೂಜಾರಿ ಹೇಳಿದರು.ಚಾಲಕ ವೃತ್ತಿಯಲ್ಲಿರುವ ಪತಿ ಜಯಾನಂದ ಹಾಗೂ ಇಬ್ಬರು ವಿದ್ಯಾರ್ಥಿ ಪುತ್ರರಿರುವ ಕುಟುಂಬದಲ್ಲಿ, ಶಕುಂತಳಾ ಅವರು ತಮ್ಮದೇ ಆದ ಉದ್ಯಮದ ಮೂಲಕ ಕುಟುಂಬಕ್ಕೆ ಮತ್ತೊಂದು ಆದಾಯದ ದಾರಿ ತೆರೆದಿದ್ದಾರೆ.