ಅಬ್ಬಿಗೇರಿ ಗ್ರಾಮದಲ್ಲಿ ಮಳೆರಾಯನಿಗಾಗಿ ಗುರ್ಜಿ ಪೂಜೆಯ ಮೊರೆ

KannadaprabhaNewsNetwork |  
Published : Jun 20, 2026, 02:45 AM IST
ನರೇಗಲ್ಲ ಸಮೀಪದ ಅಬ್ಬಿಗೇರಿ ಗ್ರಾಮದ ಗೌಡ್ರ ಓಣಿಯಲ್ಲಿ ಮಳೆಗಾಗಿ ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿ ಜನಪದ ಗೀತೆಗಳನ್ನು ಹಾಡುತ್ತ ಗ್ರಾಮದಲ್ಲಿ ಸಂಚರಿಸುತ್ತಿರುವ ರೈತ ಮಹಿಳೆಯರು. | Kannada Prabha

ಸಾರಾಂಶ

ಗುರ್ಜಿ... ಗುರ್ಜಿ... ಎಲ್ಲಾಡಿ ಬಂದೆ... ಹಳ್ಳ- ಕೊಳ್ಳ ತಿರುಗಾಡಿ ಬಂದೆ... ಕಾರ ಮಳೆಯೇ, ಕಪ್ಪತ್ತ ಮಳೆಯೇ... ಬಣ್ಣ ಕೊಡತಿನಿ ಬಾ ಮಳೆಯೇ... ಸುಣ್ಣ ಕೊಡತಿನಿ ಸುರಿಮಳೆಯೇ... ಎಂಬ ಜನಪದ ಗೀತೆಯ ನಾದಗಳು ಗ್ರಾಮದ ಗೌಡ್ರ ಓಣಿಯಲ್ಲಿ ಪ್ರತಿಧ್ವನಿಸುತ್ತಿದ್ದವು.

ನರೇಗಲ್ಲ: ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಮಳೆ ಎಂದರೆ ಕೇವಲ ಹವಾಮಾನವಲ್ಲ, ಅದು ಬದುಕಿನ ಉಸಿರು, ರೈತನಿಗೆ ಬದುಕು. ಆ ಬದುಕಿನ ಭರವಸೆ ಕೈತಪ್ಪುವ ಭಯ ಎದುರಾದಾಗ ಗ್ರಾಮೀಣರು ಇಂದಿಗೂ ತಮ್ಮ ಪಾರಂಪರಿಕ ಆಚರಣೆಗಳ ಮೊರೆ ಹೋಗುತ್ತಾರೆ. ಅಂತಹ ಅಪರೂಪದ ಜನಪದ ಸಂಪ್ರದಾಯವೊಂದಕ್ಕೆ ಸಮೀಪದ ಅಬ್ಬಿಗೇರಿ ಗ್ರಾಮ ಸಾಕ್ಷಿಯಾಯಿತು.ಗುರ್ಜಿ... ಗುರ್ಜಿ... ಎಲ್ಲಾಡಿ ಬಂದೆ... ಹಳ್ಳ- ಕೊಳ್ಳ ತಿರುಗಾಡಿ ಬಂದೆ... ಕಾರ ಮಳೆಯೇ, ಕಪ್ಪತ್ತ ಮಳೆಯೇ... ಬಣ್ಣ ಕೊಡತಿನಿ ಬಾ ಮಳೆಯೇ... ಸುಣ್ಣ ಕೊಡತಿನಿ ಸುರಿಮಳೆಯೇ... ಎಂಬ ಜನಪದ ಗೀತೆಯ ನಾದಗಳು ಗ್ರಾಮದ ಗೌಡ್ರ ಓಣಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ಹೊಲಗಳಲ್ಲಿ ಮೊಳಕೆಯೊಡೆದ ಬೀಜಗಳು ನೀರಿಗಾಗಿ ಕಾಯುತ್ತಿವೆ. ಮಣ್ಣು ಒಣಗುತ್ತಿದೆ. ದಿನದಿಂದ ದಿನಕ್ಕೆ ರೈತರ ಚಿಂತೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ತಲೆಮಾರುಗಳಿಂದ ಆಚರಿಸಿಕೊಂಡು ಬಂದಿರುವ ಗುರ್ಜಿ ಪೂಜೆಯನ್ನು ನೆರವೇರಿಸಿದರು.

ಬೆಳಗ್ಗೆಯಿಂದಲೇ ಮಹಿಳೆಯರು ಪೂಜೆಗೆ ಸಿದ್ಧತೆ ನಡೆಸಿ ಆಕಳ ಸಗಣಿಯಿಂದ ಗುರ್ಜಿ ಮೂರ್ತಿಯನ್ನು ತಯಾರಿಸಿ ರೊಟ್ಟಿ ಬೇಯಿಸುವ ತೆವಿಯ ಮೇಲೆ ಪ್ರತಿಷ್ಠಾಪಿಸಿದರು. ಅದರ ಮೇಲೆ ಹಸಿರು ಹುಲ್ಲು, ಕಾಡು ಹೂವುಗಳು ಹಾಗೂ ಎಲೆಗಳಿಂದ ಅಲಂಕಾರ ಮಾಡಲಾಯಿತು. ನಂತರ ಮಹಿಳೆಯರು ಗುಂಪುಗಳಾಗಿ ಸೇರಿ ಹಾಡುಗಳನ್ನು ಹಾಡುತ್ತ ಗ್ರಾಮದ ಓಣಿ- ಓಣಿಗಳಲ್ಲಿ ಸಂಚರಿಸಿದರು.ಪೂಜೆಯ ನಂತರ ಸಂಗ್ರಹವಾದ ದವಸಧಾನ್ಯಗಳಿಂದ ಗೋದಿ ಹುಗ್ಗಿ, ಜೋಳದ ಸಂಗಟಿ, ಸಾರು ಹಾಗೂ ಪಲ್ಲೆ ತಯಾರಿಸಲಾಯಿತು. ಗ್ರಾಮದ ಸಮೀಪದ ಹಳ್ಳದ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜಂಗಮರಾಧನೆ ನಡೆಸಲಾಯಿತು. ಬಳಿಕ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಮಾಡಿ ಮಳೆಗಾಗಿ ಸಮೂಹ ಪ್ರಾರ್ಥನೆ ಸಲ್ಲಿಸಲಾಯಿತು.ಈ ವೇಳೆ ರೈತ ಮಹಿಳೆಯರಾದ ಮಲ್ಲಮ್ಮ ಬೇಲೇರಿ, ಮಂಜಕ್ಕ ಸೊಬರದ, ಶಿವಲೀಲಾ ಪಾಟೀಲ, ಸಂಗಮ್ಮ ಬಾಗೂರ, ಅಕ್ಕಮ್ಮ ಚನ್ನಪ್ಪಗೌಡ್ರ, ವೀಣಾ ಬೇಲೇರಿ ಹಾಗೂ ಕವಿತಾ ಕಿರಟಗೇರಿ ಇತರರು ಇದ್ದರು.

ವರುಣನ ಕೃಪೆಗಾಗಿ ದೈವದ ಮೊರೆ

ಹೊಳೆಆಲೂರು: ಗ್ರಾಮೀಣ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಬೇಕೆಂದರೆ ಅದು ಮಳೆಯಾಗಿ, ಸಂಪೂರ್ಣ ಬೆಳೆ ಬಂದಾಗ ಮಾತ್ರ. ಮಳೆಯ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಹೀಗಾಗಿ ಗ್ರಾಮೀಣರು ಇಂದಿಗೂ ತಮ್ಮ ಪಾರಂಪರಿಕ ಆಚರಣೆಗಳ ಮೊರೆ ಹೋಗುತ್ತಿದ್ದಾರೆ.

ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಳೆಗಾಗಿ ಮಾಡುವ ಸಂಪ್ರದಾಯಗಳಲ್ಲೊಂದಾದ ಗೊಂಬೆ ಜೋಳ ತೈ ಚಿಕ್ಕ ಮಕ್ಕಳು ಒಂದು ಮರದಲ್ಲಿ ಜೋಳದೊಂದಿಗೆ ಗೊಂಬೆ ಇಟ್ಟು, ಗ್ರಾಮದ ಪ್ರತಿ ಮನೆಗೆ ತೆರಳಿ ಜೋಳ ಹಾಕಿಸಿಕೊಂಡು ಕೂಡಿಡುತ್ತಾರೆ. ಗ್ರಾಮದ ಮಹಿಳೆಯರು ಸೇರಿ ಸಂತೆ ಮಾಡಿ, ನುಚ್ಚು ಹಾಕಿಸಿ ಸಂಕಟಿ ಸಾರು ಮಾಡಿ ಹಳ್ಳಕ್ಕೆ ಹೋಗಿ ಮಳೆರಾಯನ ಕೃಪೆಗೆ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಮಹಿಳೆಯರೆಲ್ಲರೂ ಪ್ರಸಾದ ಮಾಡಿ ತಂದು ಮನೆಯವರೊಂದಿಗೆ ಸೇವನೆ ಮಾಡುತ್ತಾರೆ.ಈ ಪೂಜೆಯನ್ನು ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಮಾಡುವ ಪ್ರತೀತಿ ಇದೆ. ಹೀಗೆ ಮಾಡಿದರೆ ಮಳೆರಾಯ ಆಗುತ್ತಾನೆ ಎಂಬುದು ಗ್ರಾಮೀಣ ಭಾಗದ ರೈತ ಮಹಿಳೆಯರ ನಂಬಿಕೆ. ಅಲ್ಲದೆ ಈ ನಂಬಿಕೆಗೆ ಮಳೆ ಆಗಿದ್ದು ಇಲ್ಲಿ ಸಾಕಷ್ಟು ಬಾರಿ ಕಾಣಬಹುದಾಗಿದೆ.ಇದು ಒಂದು ಗ್ರಾಮದ ರೈತರ ಗೋಳಲ್ಲ ಹೊಳೆಆಲೂರ ಹೋಬಳಿ ಸೇರಿದಂತೆ ಬೆನಹಾಳ, ಹುನಗುಂಡಿ, ಅಸೂಟಿ, ಗಾಡಗೋಳಿ, ಹೊಳೆಮಣ್ಣೂರ, ಸೋಮನಕಟ್ಟಿ, ಮೇಲ್ಮಠ, ಮೆಣಸಗಿ, ಗುಳಗಂಡಿ, ಅಮರಗೋಳ, ಹೊಳೆಹಡಗಲಿ, ಬಿ.ಎಸ್. ಬೇಲೇರಿ, ಬಸರಕೋಡ, ಮಾಳವಾಡ ಗ್ರಾಮಗಳ ಪ್ರದೇಶಗಳಲ್ಲಿ ಮಳೆ ಆಗದೆ ರೈತರು ದೇವರ ಮೊರೆ ಹೋಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಜನೆ ಕಾಲಹರಣಕ್ಕಲ್ಲ: ಶ್ರೀ ವೇದವರ್ಧನ ತೀರ್ಥರು
ಫ್ಲೆಕ್ಸ್ ತೆರವಿಗೆ ವಿರೋಧ: ಪುರಸಭೆಗೆ ಮುತ್ತಿಗೆ ಪ್ರತಿಭಟನೆ