ಮುಳಗುಂದ: ಗುರು- ಶಿಷ್ಯರ ಸಂಬಂಧ ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ, ಆಧ್ಯಾತ್ಮಿಕತೆ ಮತ್ತು ಮಾರ್ಗದರ್ಶನ ನೀಡುವ ಪವಿತ್ರ ಮತ್ತು ಆಳವಾದ ಬಾಂಧವ್ಯವಾಗಿದೆ ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ತಿಳಿಸಿದರು.
ಗುರು, ಶಿಷ್ಯರ ಕುರುಹುಗಳು ಈ ಭೂಮಿ ಮೇಲೆ ಬರುತ್ತವೆ, ಹೋಗುತ್ತವೆ. ಶಿಶುನಾಳ ಷರೀಫರನ್ನು ಅರಸಿಕೊಂಡು ಗುರು ಗೋವಿಂದ ಭಟ್ಟರು ಬಂದರು. ಹೀಗೆ ಶಿಷ್ಯರನ್ನು ಅರಸಿಕೊಂಡು ಗುರು ಹೋದರೆ, ಗುರುವನ್ನು ಅರಸಿ ಶಿಷ್ಯ ಹೋಗುತ್ತಾನೆ. ಗುರು, ಶಿಷ್ಯರಲ್ಲಿ ಎಂತಹ ಭಾವನೆ ಇರಬೇಕು ಎಂದರೆ ಇವ ನನ್ನವ ಎನ್ನುವ ಭಾವನೆ ಗುರುವಲ್ಲಿ ಇರುಬೇಕು. ಅಂದಾಗ ಶಿಷ್ಯನಾದವನು ಜೀವನದಲ್ಲಿ ಉತ್ತಮ ಸಾಧನೆ ಮಾಡುತ್ತಾನೆ ಎಂದರು.ಒಂದು ಗುರುವಂದನಾ ಕಾರ್ಯಕ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಈ ರೀತಿ ಗುರುಗಳ ಸ್ಮರಿಸುವ ಸಂಸ್ಕೃತಿ ಸಮಾಜದಲ್ಲಿ ಮುಂದುವರಿಯಬೇಕು. ವಿದ್ಯಾರ್ಥಿಗಳು ಚಾರಿತ್ರ್ಯವಂತರಾಗಬೇಕು ಎಂದರು.
ಬಾಮಶಿ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಮಾತನಾಡಿ, ಜೀವನದಲ್ಲಿ ಗುರಿ, ಛಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಇಂದಿನ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ಯುವ ಸಮುದಾಯ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಹಳೆಯ ಸ್ನೇಹಿತರನ್ನೆಲ್ಲ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಅಗತ್ಯವಿದೆ ಎಂದರು.ಹಳೆ ವಿದ್ಯಾರ್ಥಿ ಮಹೇಶ ಶಿರಹಟ್ಟಿ ಮಾತನಾಡಿ, 23 ವರ್ಷಗಳ ಹಿಂದೆ ಪ್ರಾಥಮಿಕ ಶಿಕ್ಷಣ ಮುಗಿಸಿ ಬಂದಾಗ ನಾವು ಒಂದು ಮುದ್ದೆಯಂತಿದ್ದೆವು. ನಮಗೆ ರೂಪ ಕೊಟ್ಟು ಮೂರ್ತಿಯನ್ನಾಗಿ ರೂಪಿಸಿದವರು ಗುರುಗಳು. ಅವರ ಋಣವನ್ನು ಎಂದಿಗೂ ತೀರಿಸಲಾಗದು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದಾಗ ಮಾತ್ರ ಗುರುವಿಗೆ ಸಂತೋಷವಾಗುವುದು ಎಂದರು.ಕಲಿಸಿದ ಗುರುಗಳನ್ನು ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಿಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾ ಭವನದವರೆಗೆ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಕಲಿಸಿದ ಗುರುಗಳನ್ನು ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಅಗಲಿದ ಗುರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು.ಈ ವೇಳೆ ಶಿಕ್ಷಣ ಪ್ರೇಮಿಗಳಾದ ಗೌರಮ್ಮ ಬಡ್ನಿ, ಡಾ. ಎಸ್.ಸಿ. ಚವಡಿ, ಬಿ.ಸಿ. ಬಡ್ನಿ, ಎಂ.ಎಂ. ಅದರಗುಂಚಿ, ಎಫ್.ಎಸ್. ಅಮೋಘಿಮಠ, ಎಸ್.ಸಿ. ಕುರ್ತಕೋಟಿ, ವಿಜಯ ನೀಲಗುಂದ, ಪ್ರಾ. ಎ.ಎಂ. ಅಂಗಡಿ, ಮುಖ್ಯೋಪಾಧ್ಯಾಯ ಇ.ಎಂ. ಗುಳೇದಗುಡ್ಡ, ಬಿ.ಜಿ. ಯಳವತ್ತಿ, ವೈ.ಎಚ್. ಚಲವಾದಿ, ಚಂದ್ರಶೇಖರ ಎಸ್., ಎಸ್.ಎಫ್. ಮುದ್ದಿನಗೌಡ್ರ, ಆರ್.ಆರ್. ಪಟ್ಟಣ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.