ಕನ್ನಡಪ್ರಭ ವಾರ್ತೆ ಉಡುಪಿ
ಪ್ರಶಸ್ತಿಯನ್ನು ನವೆಂಬರ್‌ನಲ್ಲಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಡಗುತಿಟ್ಟು ಯಕ್ಷಗಾನ ಪ್ರಪಂಚದಲ್ಲಿ ಬಣ್ಣದ ವೇಷಧಾರಿಯಾಗಿ ಖ್ಯಾತರಾಗಿರುವ ಜಗನ್ನಾಥ ಆಚಾರ್ಯರು, ಬ್ರಹ್ಮಾವರ ತಾಲೂಕಿನ ಎಳ್ಳಂಪಳ್ಳಿ ಎಂಬಲ್ಲಿ ೧೯೫೬ರಲ್ಲಿ ಜನಿಸಿದರು. ೫ನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗ, ಪೇತ್ರಿ ಮಾಧವ ನಾಯ್ಕ್ ಅವರಿಂದ ಪ್ರಾಥಮಿಕ ನೃತ್ಯಾಭ್ಯಾಸ ಮಾಡಿ ಬಾಲಗೋಪಾಲನಾಗಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಂತರ ಉಡುಪಿ ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ಯಕ್ಷಗಾನ ವಿದ್ಯೆ ಕಲಿತು, ಕೇಂದ್ರದ ಕಾಯಂ ಸದಸ್ಯರಾಗಿ ಗುರು ವೀರಭದ್ರ ನಾಯಕ್, ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲ ರಾವ್, ಮಹಾಬಲ ಕಾರಂತ, ವೆಂಕಟರಮಣ ಗಾಣಿಗ ಮುಂತಾದವರಿಂದ ತಾಳ, ಹೆಜ್ಜೆಗಾರಿಕೆಯಲ್ಲಿ ಪರಿಪೂರ್ಣತೆ ಸಾಧಿಸಿದರು.ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ ವೃತ್ತಿ ಮೇಳದಲ್ಲಿ ೩೫ ವರ್ಷ ತಿರುಗಾಟ ನಡೆಸಿದ ಆಚಾರ್ಯರು, ಕೋಟ ಶಿವರಾಮ ಕಾರಂತರಲ್ಲಿ ಸಾಂಪ್ರದಾಯಿಕ ಶೈಲಿಯ ಬಣ್ಣದ ಮುಖವರ್ಣಿಕೆ, ಒಡ್ಡೋಲಗ ಕ್ರಮ, ವೇಷಭೂಷಣ ನಡೆಗಳ ಕುರಿತಾದ ಸಮಗ್ರ ಅಧ್ಯಯನ ನಡೆಸಿ ಕಾರಂತರೊಂದಿಗೆ ರಷ್ಯಾ, ದುಬೈ, ಅಬುಧಾಬಿ ಸಹಿತ ವಿವಿಧ ರಾಷ್ಟ್ರಗಳಲ್ಲಿ ತಿರುಗಾಟ ನಡೆಸಿದರು.