ಜಗಳೂರಿಗೆ ₹70.48 ಕೋಟಿ ಬೆಳೆ ವಿಮೆ ಬಿಡುಗಡೆ

KannadaprabhaNewsNetwork | Published : Jul 28, 2024 2:09 AM

ಸಾರಾಂಶ

ಬರಪೀಡಿತ ಜಗಳೂರು ತಾಲೂಕಿನ 15789 ರೈತರಿಗೆ ₹70.48 ಕೋಟಿ ಬೆಳೆ ವಿಮೆ ಬಿಡುಗಡೆಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ಹೇಳಿದ್ದಾರೆ.

- ರೈತರಿಂದ ಸನ್ಮಾನ ಸ್ವೀಕರಿಸಿ ಜಗಳೂರು ಶಾಸಕ ದೇವೇಂದ್ರಪ್ಪ

- - -

ಕನ್ನಡಪ್ರಭ ವಾರ್ತೆ, ಜಗಳೂರು

ಬರಪೀಡಿತ ಜಗಳೂರು ತಾಲೂಕಿನ 15789 ರೈತರಿಗೆ ₹70.48 ಕೋಟಿ ಬೆಳೆ ವಿಮೆ ಬಿಡುಗಡೆಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಬೆಳೆವಿಮೆ ಬಿಡುಗಡೆಯಾದ ಹಿನ್ನೆಲೆಯಲ್ಲಿ ಶನಿವಾರ ಪ್ರವಾಸಿ ಮಂದಿರದಲ್ಲಿ ರೈತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಜಗಳೂರನ್ನು ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಿತ್ತು. ಬಳಿಕ ಕೇಂದ್ರದಿಂದ ಬಂದ ಬರ ಅಧ್ಯಯನ ತಂಡಕ್ಕೆ ತಾಲೂಕಿನಲ್ಲಿನ ಪರಿಸ್ಥಿತಿ ಸಮರ್ಪಕವಾಗಿ ಮನವರಿಕೆ ಮಾಡಿಕೊಡಲಾಗಿತ್ತು. ಅದರ ಫಲವಾಗಿ ರೈತರಿಗೆ ಬೆಳೆ ಪರಿಹಾರ ಶೇ.80ರಷ್ಟು ಪರಿಹಾರ ಸಿಕ್ಕಿದ್ದು ಸ್ವಾಗತಾರ್ಹ. ರೈತರ ಪರವಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶೀರ್ಘದಲ್ಲೇ ಸಿರಿಗೆರೆ ಶ್ರೀಗಳಿಂದ ಕೆರೆಗಳಿಗೆ ಭೇಟಿ:

ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಆಶೀರ್ವಾದದಿಂದ 57 ಕೆರೆಗಳಲ್ಲಿ 30ಕ್ಕೂ ಅಧಿಕ ಕೆರೆಗಳಿಗೆ ನೀರು ಬರುತ್ತಿದೆ. ಇದು ರೈತರ ಮುಖದಲ್ಲಿ ಸಂತಸ ತಂದಿದೆ. ಉಳಿದ ಕಾಮಗಾರಿಗಳು ಪೂರ್ಣಗೊಳ್ಳುವ ಮೂಲಕ ಎಲ್ಲ ಕೆರೆಗಳಿಗೆ ನೀರು ಹರಿಯಲಿದೆ. ಶೀರ್ಘದಲ್ಲೇ ಎಲ್ಲ ಕೆರೆಗಳಿಗೂ ಸಿರಿಗೆರೆ ಶ್ರೀಗಳು ಭೇಟಿ ನೀಡಿ, ಪರಿಶೀಲಿಸಲಿದ್ದಾರೆ ಎಂದು ಶಾಸಕರು ತಿಳಿಸಿದರು.

ದಾವಣಗೆರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿದರು. ಮಾಜಿ ಜಿ.ಪಂ. ಸದಸ್ಯ ಕೆ.ಪಿ.ಪಾಲಯ್ಯ, ಕೃಷಿ ಇಲಾಖೆ ನಿರ್ದೇಶಕಿ ಶ್ವೇತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕಾಂಗ್ರೆಸ್ ಮುಖಂಡರಾದ ಬಿ.ಮಹೇಶ್ವರಪ್ಪ, ಬಿಳಿಚೊಡು ಓಮಣ್ಣ, ಪಲ್ಲಾಗಟ್ಟೆ ಶೇಖರಪ್ಪ, ವೆಂಕಟೇಶ್, ಮಾರುತಿ, ದಿದ್ದಿಗಿ ಪ್ರಕಾಶ್, ಗುರುಮೂರ್ತಿ, ಅಜಾಮುಲ್ಲಾ, ಪ್ರಕಾಶ್ ರೆಡ್ಡಿ ಇತರರು ಉಪಸ್ಥಿತರಿದ್ದರು.

- - -

ಟಾಪ್‌ ಕೋಟ್‌ ಕೇಂದ್ರ ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿ, ₹5400 ಕೋಟಿ ಮೀಸಲಿಡಲಾಗಿದೆ ಎಂದು ಭರವಸೆ ನೀಡಿ, ದೊಡ್ಡದಾಗಿ ಪ್ರಚಾರ ಮಾಡಿತು. ಆ ಮೂಲಕ ಎಲ್ಲ ತಾಲೂಕು ಕೇಂದ್ರಗಳಲ್ಲಿ ಶಾಸಕರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಆದರೆ, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಭದ್ರಾ ಯೋಜನೆ ನುಣುಚಿಕೊಂಡಿದೆ. ಕರ್ನಾಟಕಕ್ಕೆ, ಜಗಳೂರಿಗೆ ಮೋಸವಾಗಿದೆ

- ದೇವೇಂದ್ರಪ್ಪ, ಶಾಸಕ, ಜಗಳೂರು ಕ್ಷೇತ್ರ

- - - -27:

ಜಗಳೂರು ತಾಲೂಕಿನ ರೈತರಿಗೆ ಬೆಳೆವಿಮೆ ಬಿಡುಗಡೆಯಾದ ಹಿನ್ನೆಲೆ ರೈತರು ಪಟ್ಟಣದಲ್ಲಿ ಶನಿವಾರ ಪ್ರವಾಸಿ ಮಂದಿರದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಸನ್ಮಾನಿಸಿದರು.

Share this article