ಕನ್ನಡಪ್ರಭ ವಾರ್ತೆ ಹಾಸನ
ಎಸ್‌ಜೆಪಿ ಯೋಗ ಸಂಸ್ಥೆಯ ಎರಡು ಕೇಂದ್ರಗಳ ಯೋಗ ಸಾಧಕರು ಒಂದೆಡೆ ಸೇರಿ ಗುರು ಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಿದರು. ಯೋಗಾಭ್ಯಾಸದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಯೋಗಗುರುಗಳ ಕೊಡುಗೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ನಿವೃತ್ತ ನೌಕಾಪಡೆ (ನೇವಿ) ಸದಸ್ಯ ರೋಟರಿಯನ್ ಮದನ್ ಕುಮಾರ್ ಹಾಗೂ ಶೇಷಪ್ಪ ಭಾಗವಹಿಸಿ, ಗುರುಗಳ ಮಾರ್ಗದರ್ಶನದಿಂದ ವ್ಯಕ್ತಿಯ ಜೀವನದಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ಆರೋಗ್ಯಕರ ಬದುಕು ರೂಪುಗೊಳ್ಳುತ್ತದೆ ಎಂದು ಹೇಳಿದರು. ಯೋಗವು ಕೇವಲ ವ್ಯಾಯಾಮವಲ್ಲ, ಅದು ಸಮಗ್ರ ಜೀವನಶೈಲಿಯಾಗಿದ್ದು ಪ್ರತಿಯೊಬ್ಬರೂ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಸ್‌ಜೆಪಿ ಯೋಗ ತಂಡದ ಹಿರಿಯ ಯೋಗ ಸಾಧಕ ಬಿ. ಎಸ್. ಪ್ರದೀಪ್ ಮಾತನಾಡಿ, ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವೇ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು. ಯೋಗದ ಮಹತ್ವ, ನಿಯಮಿತ ಅಭ್ಯಾಸದ ಪ್ರಯೋಜನಗಳು ಹಾಗೂ ಸಮಾಜದಲ್ಲಿ ಯೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಸುನಿತಾ ಪ್ರಾರ್ಥನಾ ಗೀತೆ ಹಾಡಿದರು. ಕುಮಾರಿ ಐಶ್ವರ್ಯ, ಬ್ರಹ್ಮ್ಯಾ ಮತ್ತು ಮಾನಸ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕನಸು ಅವರ ನೃತ್ಯ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ಒಂದು ವರ್ಷದಿಂದ ಯಾವುದೇ ವಿರಾಮವಿಲ್ಲದೆ ಯೋಗ ತರಬೇತಿ ನೀಡುತ್ತಾ ಬಂದಿರುವ ಯೋಗಗುರು ಸುರೇಶ್ ಪ್ರಜಾಪತಿ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಯೋಗ ಸಾಧಕರು ತಮ್ಮ ಗುರುಗಳ ಮಾರ್ಗದರ್ಶನವನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ನಂತರ ಯೋಗ ಸಾಧಕರು ಭಕ್ತಿಪೂರ್ವಕ ನೃತ್ಯದ ಮೂಲಕ ಗುರುಗಳಿಗೆ ಗೌರವ ಸಮರ್ಪಿಸಿದರು. ಅಲ್ಲದೆ, ಯೋಗಾಭ್ಯಾಸದಿಂದ ತಮ್ಮ ಜೀವನದಲ್ಲಿ ಉಂಟಾದ ಸಕಾರಾತ್ಮಕ ಬದಲಾವಣೆಗಳು ಹಾಗೂ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಾತ್ವಿಕ ಆಹಾರವನ್ನು ವಿತರಿಸಲಾಯಿತು. ಮನೆಯಲ್ಲೇ ಸಿದ್ಧಪಡಿಸಿದ ಮೊಳಕೆಕಾಳು ಹಾಗೂ ಪಪ್ಪಾಯಿ ಹಣ್ಣಿನ ಮಿಶ್ರಣವನ್ನು ಪ್ರಸಾದ ರೂಪದಲ್ಲಿ ವಿತರಿಸುವ ಮೂಲಕ ಆರೋಗ್ಯಕರ ಆಹಾರದ ಮಹತ್ವವನ್ನು ಸಾರಲಾಯಿತು.ಈ ಕಾರ್ಯಕ್ರಮದಲ್ಲಿ ಎಸ್‌ಜೆಪಿ ಯೋಗ ತಂಡದ ಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಯೋಗ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.