ಹುಬ್ಬಳ್ಳಿ: ನಗರದ ವಿವಿಧ ರಾಯರ ಮಠಗಳಲ್ಲಿ ಭಾನುವಾರ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ನಡೆಯಿತು. ಬೆಳಗ್ಗೆಯಿಂದಲೇ ಮಠಗಳತ್ತ ಭಕ್ತರ ದಂಡು ಹರಿದುಬಂದಿದ್ದು, ಎಲ್ಲೆಡೆ "ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಪಾಹಿಮಾಮ್ " ಎಂಬ ನಾಮಸ್ಮರಣೆ ಅನುರಣಿಸಿತು.
ಭವಾನಿನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸಹಸ್ರಾರು ಭಕ್ತರು ಆಗಮಿಸಿ ಅಲಂಕೃತ ಬೃಂದಾವನದ ದರ್ಶನ ಪಡೆದರು. ಕೆಲವು ಭಕ್ತರು ಪ್ರಹ್ಲಾದ ರಾಜರ ಕನಕಾಭಿಷೇಕ ಸೇವೆ ಸಲ್ಲಿಸಿ ಹರಕೆ ತೀರಿಸಿದರು. ನಗರದ ಕುಬೇರಪುರಂ ರಾಯರ ಮಠ, ತೊರವಿಗಲ್ಲಿ ರಾಯರ ಮಠ ಹಾಗೂ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿರುವ ರಾಯರ ಮಠ ಸೇರಿದಂತೆ ವಿವಿಧ ಮಠಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತರು ತಮ್ಮ ಶಕ್ತ್ಯಾನುಸಾರ ವಿವಿಧ ಸೇವೆಗಳನ್ನು ಸಲ್ಲಿಸಿದರು.
ಭಜನಾ ಮಂಡಳಿಗಳ ಸದಸ್ಯರು ರಾಯರ ಕುರಿತು ದಾಸರ ಕೀರ್ತನೆಗಳನ್ನು ಹಾಡಿ ಭಕ್ತಿಸೇವೆ ಸಲ್ಲಿಸಿದರು. ನಗರದ ವಿವಿಧ ಮಠಗಳ ಬೃಂದಾವನಗಳಿಗೆ ಮಾಡಿದ್ದ ವಿಶೇಷ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು. ಸಂಜೆ ವೇಳೆಗೆ ಮಠಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.ಮಧ್ಯಾರಾಧನೆ ನಿಮಿತ್ತ ಬ್ರಾಹ್ಮಣರ ಅಲಂಕಾರ ಪೂಜೆ, ಪಲ್ಲಕ್ಕಿ ಸೇವೆ, ಅಷ್ಟಾವಧಾನ, ತೊಟ್ಟಿಲು ಸೇವೆ, ಭಜನೆ, ಪಲ್ಲಕ್ಕಿ ಉತ್ಸವ ಹಾಗೂ ಡೋಲೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ದಿನವಿಡೀ ನಡೆದವು. ರಾಯರ ನಾಮಸ್ಮರಣೆ, ಭಜನೆ ಮತ್ತು ಧಾರ್ಮಿಕ ಕೈಂಕರ್ಯಗಳಿಂದ ಮಠಗಳ ಆವರಣಗಳು ಭಕ್ತಿಮಯ ವಾತಾವರಣದಿಂದ ಕಳೆಗಟ್ಟಿದ್ದವು.