ಮನಸ್ಸನ್ನು ಶಿಸ್ತುಬದ್ಧವಾಗಿಸಿ ಒಳಮುಖವಾಗಿಸಿ: ಗುರು ಸಕಲಮಾ

KannadaprabhaNewsNetwork | Published : Sep 23, 2024 1:27 AM

ಸಾರಾಂಶ

ಮನಸ್ಸನ್ನು ಶಿಸ್ತುಬದ್ಧವಾಗಿ ಒಳಮುಖವಾಗಿಸಿಕೊಂಡರೆ ಮಾತ್ರ ಅಧ್ಯಾತ್ಮದ ಶಕ್ತಿ ಉದ್ದೀಪನಗೊಳ್ಳುತ್ತದೆ ಎಂದು ಶ್ರೀವಿದ್ಯೆಯ ಗುರು ಸಕಲಮಾ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನಸ್ಸನ್ನು ಶಿಸ್ತುಬದ್ಧವಾಗಿ ಒಳಮುಖವಾಗಿಸಿಕೊಂಡರೆ ಮಾತ್ರ ಅಧ್ಯಾತ್ಮದ ಶಕ್ತಿ ಉದ್ದೀಪನಗೊಳ್ಳುತ್ತದೆ ಎಂದು ಶ್ರೀವಿದ್ಯೆಯ ಗುರು ಸಕಲಮಾ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ತಮ್ಮ ರಚನೆಯ ‘ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕನ್ನಡ ಮತ್ತು ಇಂಗ್ಲಿಷ್‌ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಅನುಮಾನ, ಪ್ರಶ್ನೆಗಳನ್ನು ಬದಿಗಿಟ್ಟು ಕೊಂಚ ಪ್ರಯತ್ನ ಮಾಡಿ ಮನಸ್ಸನ್ನು ಶಿಸ್ತುಬದ್ಧವಾಗಿ ಒಳಮುಖವಾಗಿಸಿಕೊಂಡರೆ ಮಾತ್ರ ಅಧ್ಯಾತ್ಮ ಅರಿವಿಗೆ ಬರುತ್ತದೆ. ಹೊರಗಡೆಗಿಂತ ಸುಂದರವಾದ ಜಗತ್ತು ಒಳಗಡೆ ಇದೆ. ಅದು ನಮ್ಮದೇ ಪ್ರಪಂಚ ಎಂಬುದು ಅನುಭವಕ್ಕೆ ಬರಲು ಸಾಧ್ಯ. ಸಾಧಕರು ನಮ್ಮ ಬುದ್ಧಿಗೆ ನಿಲುಕಲಾಗದ ಸಿದ್ಧಪುರುಷರಾಗಿರುತ್ತಾರೆ. ಮಹತ್ತರವಾದ, ಕ್ಲಿಷ್ಟಕರ ಗ್ರಂಥಗಳನ್ನು ಓದುವುದು ನಮ್ಮ ತೃಪ್ತಿಗೆ ಮಾತ್ರ. ಗುರುವಿನ ಜೊತೆ ಇದ್ದರೆ ಸಾಕು, ಅವರು ಹೇಳುವ ಒಂದೇ ವಿಚಾರ ನಮಗೆ ಶ್ರೀವಿದ್ಯೆಯ ಅರಿವು ಸಿಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಅಹಲ್ಯಾ ಶರ್ಮಾ ಮಾತನಾಡಿ, ಪೂರ್ಣ ಜ್ಞಾನ ಇಲ್ಲದಿದ್ದರೆ ಗೊಂದಲ‌ ಸಹಜ. ಅಥವಾ ನಮ್ಮ ತಿಳಿವಳಿಕೆ ಮಟ್ಟಕ್ಕೆ ನಾವು ಕೆಲವನ್ನು ಅರ್ಥಮಾಡಿಕೊಳ್ಳುತ್ತೇವೆ. ನಾವು ಕಾಣದಿರುವಷ್ಟು ವಿಚಾರಗಳು ಸಾಕಷ್ಟಿದೆ. ಅದನ್ನು ನೋಡಲು, ಅನುಭವಕ್ಕೆ ತಂದುಕೊಳ್ಳಲು ಮನಸ್ಸಿಗೆ ತಯಾರಿ ಬೇಕಾಗುತ್ತದೆ ಎಂದರು.

‘ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು’ ಕೃತಿ ಉತ್ತರ ದಕ್ಷಿಣದ ಪರಂಪರೆಯನ್ನು ಸೇರಿಸಿ ಅಂದರೆ ವಿದ್ಯಾರಣ್ಯರ ದಾರಿ ಹಾಗೂ ಹಿಮಾಲಯದ ಗುರುಗಳ ದಾರಿಯಲ್ಲಿ ಸಾಗಿಬಂದ ಸಂಗಮವಾಗಿದೆ. ಹಿಮಾಲಯದ ಸಂತರ ಸಂದೇಶವನ್ನು ತಮ್ಮ ಜೀವನಕ್ಕೆ ತಂದುಕೊಂಡು ಅದನ್ನು ಗುರು ಸಕಲಮಾ ಜನತೆಗೆ ಉಣಬಡಿಸಿದ್ದಾರೆ ಎಂದರು

ನಟಿ ಪ್ರಿಯಾಂಕಾ ಉಪೇಂದ್ರ, ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ ಪ್ರದೀಪ್ ರಾವ್ ಮಾತನಾಡಿದರು. ಕರಣ್‌ಸಿಂಗ್‌ ಬಾಜ್ವಾ, ಗೌರವ್‌ಸಿಂಗ್‌ ಬಾಜ್ವಾ ಸಹೋದರರು ‘ದುರ್ವಾಸರ ಲೋಕಕ್ಕೊಂದು ಕನಸಿನ ಪಯಣ’ ರಂಗ ಪ್ರದರ್ಶನ ನೀಡಿದರು.

Share this article