ಕುಂದಾಪುರ: ಇಲ್ಲಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲಿನಲ್ಲಿ ೨೦೨೫-೨೬ನೇ ಸಾಲಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. ಮಣಿಪಾಲ ಎಂ.ಐ.ಟಿ.ಯ ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ, ಗಾಷ್ಟ್ರೀಯ ತರಬೇತುದಾರ ಡಾ.ಹರಿಣಾಕ್ಷಿ ಕರ್ಕೇರ ಕಾರ್ಯಕ್ರಮ ಉದ್ಘಾಟಿಸಿ, ನಮ್ಮ ಜೀವನವು ಮೌಲ್ಯಯುತ ವಿಚಾರಗಳನ್ನು ಒಳಗೊಂಡಿರಬೇಕು. ತಂತ್ರಜ್ಞಾನವು ನಮ್ಮನ್ನು ಆಳದಂತೆ ಎಚ್ಚರಿಕೆ ವಹಿಸಬೇಕು. ತಂತ್ರಜ್ಞಾನದೊಂದಿಗೆ ನಮ್ಮ ಮೂಲ ಸಂಸ್ಕೃತಿಯ ಬೇರನ್ನು ಮರೆಯಬಾರದು. ಕಲಿಕೆಯ ಜೊತೆಗೆ ಸಾಂಸ್ಕೃತಿಕ ವಿಚಾರಗಳನ್ನು ಪಾಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್.ಶೆಟ್ಟಿ ಮಾತನಾಡಿ, ಸಾಧನೆಯ ಪಥದಲ್ಲಿ ಸೋಲು ಗೆಲುವು ಸರ್ವೇ ಸಾಮಾನ್ಯ. ಸೋಲು ಗೆಲುವಿನ ಸೋಪಾನವಾಗಿ ನಮ್ಮ ಬದುಕನ್ನು ರೂಪಿಸಬೇಕು ಎಂದರು.ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಅವರ 91ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಪ್ರಾಂಶುಪಾಲೆ ಡಾ. ರೂಪಾಶಣೈ ಪ್ರಶಸ್ತಿ ವಿಜೇತರಿಗೆ ಶುಭ ಕೋರಿದರು. ಶಿಕ್ಷಕ ವಿಷ್ಣು ತಾಂಡೇಲ್ ಕಾರ್ಯಕ್ರಮ ನಿರೂಪಿಸಿದ್ದು, ವೆಂಕಟಕೃಷ್ಣ ಅತಿಥಿಗಳನ್ನು ಪರಿಚಯಿಸಿದರು. ಪ್ರತಿಮಾ ಸ್ವಾಗತಿಸಿದರು. ಶ್ವೇತಾ ವಂದಿಸಿದರು.