-2ನೇ ಅವಧಿಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟ । ಮೈತ್ರಿ ಅಭ್ಯರ್ಥಿಗೆ ಮಣೆ, ಪುರಸಭೆ ಅಧ್ಯಕ್ಷರ ಆಯ್ಕೆ ಅವಿರೋಧ ಸಾಧ್ಯತೆ ?
ಮೊಗುಲಪ್ಪ ಬಿ. ನಾಯಕಿನ್
ಕನ್ನಡಪ್ರಭ ವಾರ್ತೆ ಗುರುಮಠಕಲ್ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ 2ನೇ ಅವಧಿಗಾಗಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಸಾಧ್ಯತೆಯಿದ್ದು, ಉಪಾಧ್ಯಕ್ಷ ಪಟ್ಟಕ್ಕಾಗಿ ಪೈಪೋಟಿ ನಡೆದಿದೆ.
ಪಟ್ಟಣದಲ್ಲಿ ಒಟ್ಟು 23 ಪುರಸಭೆ ಸದಸ್ಯರ ಪೈಕಿ, ಕಾಂಗ್ರೆಸ್ ಸದಸ್ಯರು 12, ಜೆಡಿಎಸ್ ಸದಸ್ಯರು 8 ಜನ, ಬಿಜೆಪಿ ಇಬ್ಬರು ಹಾಗೂ ಒಬ್ಬರು ಸ್ವತಂತ್ರ ಸದಸ್ಯರು ಇದ್ದಾರೆ.
2ನೇ ಅವಧಿಯಲ್ಲಿ ಅಧ್ಯಕ್ಷಕ್ಕಾಗಿ (ಬಿಸಿಬಿ) ಮಹಿಳೆ ಮೀಸಲಾತಿ ಬಂದಿದೆ. ಸಹಜವಾಗಿ ಬೇರೆ ಪಕ್ಷದಲ್ಲಿ (ಬಿಸಿಬಿ) ಮಹಿಳೆ ಸದಸ್ಯರು ಇಲ್ಲದಿರುವುದರಿಂದ ಜೆಡಿಎಸ್ ನಲ್ಲಿ ಮಾತ್ರ ಒಬ್ಬರೇ ಇರುವುದರಿಂದ ಸಹಜವಾಗಿ ಪುರಸಭೆ ಅಧ್ಯಕ್ಷ ಪಟ್ಟ ಜೆಡಿಎಸ್ ಪಾಲಾಗಲಿದೆ.
ಜೆಡಿಎಸ್ ಏಕಾಂಗಿಯಾಗಿ ಉಪಾಧ್ಯಕ್ಷ ಪಟ್ಟ ಗಿಟ್ಟಿಸಿಕೊಳ್ಳಲು ಆಗುವುದಿಲ್ಲ. ಬಿಜೆಪಿ ಮತ್ತು ಸ್ವತಂತ್ರ ಸದಸ್ಯರ ಬೆಂಬಲ ಬೇಕೇ ಬೇಕು. ಬಿಜೆಪಿಯಲ್ಲಿ ಇರುವ ಇಬ್ಬರು ಸದಸ್ಯರು ನವಿತಾ ಲಾಲಪ್ಪ ಮನ್ನೆ, ಲಕ್ಷ್ಮಿ ಬಾಯಿ ಚಂಧುಲಾಲ್ ಚೌಧರಿ ಮತ್ತು ಸ್ವತಂತ್ರ ಸದಸ್ಯ ನರ್ಮದಾ ಅವಂಗಪುರ ಮೂರು ಜನ ಮಹಿಳೆಯರಿದ್ದಾರೆ. ಇವರೆಲ್ಲರೂ ಉಪಾಧ್ಯಕ್ಷರು ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಮೈತ್ರಿ ಧರ್ಮ ಪಾಲನೆ ಆಗಬೇಕು ಎಂಬುದು ಬಿಜೆಪಿ ಮಹಿಳಾ ಸದಸ್ಯರ ಆಪೇಕ್ಷೆ ಆಗಿದೆ.
ಶಾಸಕ ಶರಣಗೌಡ ಕಂದಕೂರು ಅವರ ಅಂಗಳದಲ್ಲಿ ಚೆಂಡು ಇದ್ದು, ಅವರು ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಜೆಡಿಎಸ್ ಪಕ್ಷದಲ್ಲಿ ಉಳಿಸಿಕೊಳ್ಳುತ್ತಾರೋ? ಮೈತ್ರಿ ಪಕ್ಷಕ್ಕೆ ಬಿಟ್ಟು ಮೈತ್ರಿ ಧರ್ಮ ಪಾಲನೆ ಮಾಡುತ್ತಾರೋ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ವರೆಗೆ ಕಾದು ನೋಡಬೇಕಾಗಿದೆ.
17ವೈಡಿಆರ್3: ಗುರುಮಠಕಲ್ ಪಟ್ಟಣದ ಪುರಸಭೆ ಕಾರ್ಯಾಲಯ