ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕಳೆದ ಎರಡು ದಶಕಗಳಿಂದ ವಕೀಲ ಹಾಗೂ ಸಮಾಜ ಸೇವಕ ಅರವಿಂದ ರಾಘವನ್ ಲಕ್ಷಾಂತರ ರು. ನೀಡುತ್ತಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ಸಣಬದಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಾಲಬೈರವೇಶ್ವರ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರವಿಂದ ರಾಘವನ್ 11 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳು ಬಲವರ್ಧನೆಯಾಗಬೇಕು ಎಂದು ನಾನು ಹಲವು ಯೋಜನೆ ಹಾಕಿಕೊಂಡು ಶ್ರಮಿಸುತ್ತಿದ್ದೇನೆ. ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಆಧುನಿಕ ತಂತ್ರಜ್ಞಾನ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯ ಪೂರಕವಾಗಿದೆ. ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭವಾಗಬೇಕು. ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ರಾಘವನ್ ಕೊಡುಗೆ ಮಾದರಿಯಾಗಬೇಕು ಎಂದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮೇಲುಕೋಟೆ ಕ್ಷೇತ್ರದಲ್ಲಿ ಅರವಿಂದ ರಾಘವನ್ ಶೈಕ್ಷಣಿಕವಾಗಿ ಮಕ್ಕಳಿಗೆ ಕ್ರೀಡಾ ಸಮವಸ್ತ್ರ, ಕೊಠಡಿಗಳ ನಿರ್ಮಾಣ, ಗ್ರಂಥಾಲಯ ನಿರ್ಮಾಣ ನೆಲಗಳಿಗೆ ಟೈಲ್ಸ್ ಅಳವಡಿಕೆ, ಬಣ್ಣಹೊಡೆಸಲು ಸಹಕಾರ ಶೈಕ್ಷಣಿಕ ಪ್ರವಾಸಕ್ಕೆ ಕೊಡುಗೆ ಹೀಗೆ ಹಲವು ರೀತಿ ನಿರಂತರವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರವಿಂದ್ ರಾಘವನ್ ಮಾತನಾಡಿ, ನನಗೆ ಹಿಂದಿನಿಂದಲೂ ಸರ್ಕಾರಿ ಶಾಲೆಗಳ ಪ್ರೋತ್ಸಾಹಕ್ಕೆ ಕೈಲಾದ ಸಹಕಾರ ನೀಡಬೇಕೆಂಬ ಬಯಕೆಯಿದೆ. ಈ ಕಾರಣ ಮೇಲುಕೋಟೆ ಸುತ್ತಮುತ್ತಲ ಕ್ರಿಯಾತ್ಮಕ ಶಿಕ್ಷಕರಿರುವ ಶಾಲೆಗಳಿಗೆ ಪ್ರತಿ ವರ್ಷ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದ್ದೇನೆ ಎಂದರು.ನನ್ನ ಸೇವೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಸಹಕಾರ ನೀಡುತ್ತಿದ್ದಾರೆ. ಈ ಇಬ್ಬರೂ ನಾಯಕರ ಸಹಕಾರದಲ್ಲಿ ಮತ್ತಷ್ಟು ಅಳಿಲುಸೇವೆ ನಿರಂತರವಾಗಿ ಮಾಡುತ್ತೇನೆ ಎಂದರು.
ಸಮಾರಂಭದಲ್ಲಿ ಲೆಕ್ಕಪರಿಶೋಧಕ ಅಶೋಕ್ ರಾಘವನ್, ರಶ್ಮಿ ಅಶೋಕ್, ಆಕಾಶ್ ಅಶೋಕ್, ವೀರೇಶ್ ಸರ್ವೆಯರ್ ಶಂಕರ್, ಗ್ರಾಪಂ ಸದಸ್ಯೆ ಉಮಾ ರಾಜೇಗೌಡ, ಗ್ರಾಪಂ ಸದಸ್ಯ ನರಸಿಂಹೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣೇಗೌಡ, ಮುಖ್ಯಶಿಕ್ಷಕ ಎಂ.ಎಸ್ ಜಯಚಂದ್ರನ್ ಸಹಶಿಕ್ಷಕ ಮಹದೇವಪ್ಪ, ಇಸಿಒ ಶ್ರೀನಿವಾಸ್ ರಮೇಶ್, ಗ್ರಾಮದ ಮುಖಂಡ ಎಸ್.ಜೆ. ರಾಮು, ಅಂಗಡಿಲೋಕೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಪುಟ್ಟಮ್ಮ ಲೋಕೇಶ್ ಇತರರು ಇದ್ದರು.---