ಮೇ 1ರಂದು ಶ್ರೀರಸ ಸಿದ್ದೇಶ್ವರ ಮಠದ ಗುರುಪಟ್ಟಾಧಿಕಾರ ಮಹೋತ್ಸವ

KannadaprabhaNewsNetwork |  
Published : Apr 21, 2025, 12:47 AM IST
20ಕೆಎಂಎನ್ ಡಿ18 | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಜಾತಿ ಭೇದವಿಲ್ಲದೇ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಗುರು ಪರಂಪರೆಯಲ್ಲಿ ಬಂದ ಶ್ರೀಮಠಕ್ಕೆ ತಾಲೂಕಿನ ವಾಸುವಳ್ಳಿ ಬಸವಣ್ಣ ಮತ್ತು ಕುಮಾರಿ ದಂಪತಿಯ ಪುತ್ರ ನಾಗಬಸಪ್ಪ ಅವರನ್ನು ಮುಂದಿನ ಉತ್ತರಾಧಿಕಾರಿಯನ್ನಾಗಿ ಮಾಡಲು ಗುರುಗಳು ಹಾಗೂ ಭಕ್ತರ ಸಮಕ್ಷಮದಲ್ಲಿ ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಕುಂದೂರು ಬೆಟ್ಟದ ಸುಕ್ಷೇತ್ರ ಶ್ರೀರಸ ಸಿದ್ದೇಶ್ವರ ಮಠದಿಂದ ಮೇ 1ರಂದು ನೂತನ ಸುಕ್ಷೇತ್ರದ ಮಹಾದ್ವಾರದ ಉದ್ಘಾಟನೆ ಹಾಗೂ ಮಠದ ಗುರುಪಟ್ಟಾಧಿಕಾರ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಮಠದ ಮಠಾಧ್ಯಕ್ಷ ನಂಜುಂಡಸ್ವಾಮಿ ತಿಳಿಸಿದರು.

ತಾಲೂಕಿನ ತೆಂಕಹಳ್ಳಿಯ ಬಳಿ ಕುಂದೂರು ಬೆಟ್ಟದ ತಪ್ಪಲಿನಲ್ಲಿ ಇರುವ ಸುಕ್ಷೇತ್ರ ಶ್ರೀರಸ ಸಿದ್ದೇಶ್ವರ ಮಠದ ಆವರಣದಲ್ಲಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದಲ್ಲಿ ಜಾತಿ ಭೇದವಿಲ್ಲದೇ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಗುರು ಪರಂಪರೆಯಲ್ಲಿ ಬಂದ ಶ್ರೀಮಠಕ್ಕೆ ತಾಲೂಕಿನ ವಾಸುವಳ್ಳಿ ಬಸವಣ್ಣ ಮತ್ತು ಕುಮಾರಿ ದಂಪತಿಯ ಪುತ್ರ ನಾಗಬಸಪ್ಪ ಅವರನ್ನು ಮುಂದಿನ ಉತ್ತರಾಧಿಕಾರಿಯನ್ನಾಗಿ ಮಾಡಲು ಗುರುಗಳು ಹಾಗೂ ಭಕ್ತರ ಸಮಕ್ಷಮದಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಮೇ 1ರಂದು ದಿವ್ಯಸ್ನಾನ, ಭಸ್ಮಧಾರಣೆ, ರುದ್ರಾಕ್ಷಿಧಾರಣೆ, ಲಿಂಗಾಂಗ ಸಾಮರಸ್ಯ ಸೇರಿದಂತೆ ಧಾರ್ಮಿಕ ಸೇವೆಗಳು ನಡೆಯಲಿವೆ ಎಂದರು.

ಮಠದ ಎಲ್ಲ ಕಾರ್ಯಕ್ರಮಗಳು ದೇಗುಲ ಮಠಾಧ್ಯಕ್ಷ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಮ್ಮುಖದಲ್ಲಿ ನಡೆಯಲಿದೆ. ಪೂಜಾ ಕೈಂಕರ್ಯಗಳನ್ನು ಸಂಗಮ ಕ್ಷೇತ್ರದ ಕಾರ್ಯ ಸ್ವಾಮಿಗಳ ಮಠ ಮಹೇಶ್ವರ ಸ್ವಾಮಿ ನೆರವೇರಿಸಲಿದ್ದಾರೆ. ಮೇ 1ರ ಬೆಳಗ್ಗೆ 7 ಗಂಟೆಗೆ ಷಟ್ಸ್ಥಲ ಧ್ವಜಾರೋಹಣವನ್ನು ಮಲ್ಲನಮೂಲೆಯ ಕಂಬಳೀಶ್ವರ ಮಠದ ಚನ್ನಬಸವ ಸ್ವಾಮೀಜಿ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ 20 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗಯಾಲಿದ್ದಾರೆ. ಮಠದ ಭಕ್ತರ ಸಹಕಾರದಿಂದ ಬರುವ ಜನರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರದ ಸ್ವಾಮೀಜಿ ಸಾನಿಧ್ಯ ವಹಿಸುವರು. ತುಮಕೂರಿನ ಸಿದ್ಧಗಂಗಾ ಮಠದ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು ಸಹ ಭಾಗಿಯಾಗಲಿದ್ದಾರೆ ಎಂದರು.

ಸಭೆಯನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಕ್ಷೇತ್ರದ ಶಾಸಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು ಹಾಗೂ ಸುಕ್ಷೇತ್ರದ ಮಹಾದ್ವಾರವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕ ಕೆ.ಅನ್ನದಾನಿ, ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಮೈಸೂರಿನ ಸಹಾಯಕ ಜಿಲ್ಲಾ ಆಯುಕ್ತ ಶಿವರಾಜು, ಜಿಲ್ಲಾಪಂ ಮಾಜಿ ಅಧ್ಯಕ್ಷೆ ಸುಧಾ ಚಂದ್ರಶೇಖರ್, ಮಾಜಿ ಸದಸ್ಯೆ ಸುಜಾತಾ ಸುಂದ್ರರಪ್ಪ ಹಾಗೂ ವಿವಿಧ ವಲಯಗಳ ಪ್ರಮುಖರು ಭಾಗಿಯಾಲಿದ್ದು, ಹಲವು ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಗುವುದು ಎಂದರು.

ಈ ವೇಳೆ ವಿವಿಧ ಮಠಗಳ ಶಂಭುಲಿಂಗ ಸ್ವಾಮೀಜಿ, ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ ಹಾಗೂ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ