ಕನ್ನಡಪ್ರಭ ವಾರ್ತೆ ಹಾರನಹಳ್ಳಿ
ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠಕ್ಕೆ ಗುರು ಪೂರ್ಣಿಮೆ ದಿನವಾದ ಭಾನುವಾರದಂದು ರಾಜ್ಯದ ನಾನಾ ಭಾಗಳಿಂದ ಭೇಟಿ ನೀಡಿದ ಭಕ್ತ ವೃಂದವು ಪೀಠಾಧೀಶರಾದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿ ಗುರು ಹುಣ್ಣಿಮೆ ತನ್ನದೇ ಮಹತ್ವವನ್ನು ಹೊಂದಿದೆ. ಜೀವನದಲ್ಲಿ ಶಿಕ್ಷಣ ನೀಡಿದ ಗುರುಗಳನ್ನು ನೆನಪು ಮಾಡುಕೊಳ್ಳುವುದರ ಮೂಲಕ ಗೌರವ ಸಲ್ಲಿಸಿದರೆ, ಮತ್ತೊಂದು ಕಡೆ ಧಾರ್ಮಿಕ ಕ್ಷೇತ್ರಗಳ ಮಠ ಮಂದಿರಗಳಿಗೆ ಭೇಟಿ ನೀಡಿ ಗುರುವರ್ಯರಿಗೆ ಗೌರವಿಸಿ ಸತ್ಕರಿಸುವುದು ಭಕ್ತ ಸಮೂಹವು ಸನಾತನ ಧರ್ಮದಲ್ಲಿ ನಡೆದುಕೊಂಡು ಬಂದಿರುವ ಮತ್ತು ಬರುತ್ತಿರುವ ಸಂಸ್ಕಾರವಾಗಿದೆ.
ಆ ನಿಟ್ಟಿನಲ್ಲಿ ಶ್ರೀಮಠಕ್ಕೆ ಆಗಮಿಸಿದ್ದ ಅಪಾರ ಭಕ್ತರನ್ನು ಉದ್ದೇಶಿಸಿ ಶ್ರೀಯವರು ಮಾತನಾಡಿ, ಗುರು ಶಿಷ್ಯ ಬಾಂಧವ್ಯ ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿದ ಹೆಗ್ಗಳಿಕೆ ಭಾರತದ ಸನಾತನ ಧರ್ಮಕ್ಕೆ ಸಲ್ಲುತ್ತದೆ. ಗುರುವಿನ ಆಶೀರ್ವಾದವಿಲ್ಲದೇ ಗುರಿ ಮುಟ್ಟುವುದು ಅಸಾಧ್ಯವಾಗಿದೆ. ಧಾರ್ಮಿಕ ಕ್ಷೇತ್ರವಿರಬಹುದು, ಶಿಕ್ಷಣ ಕ್ಷೇತ್ರವಿರಬಹುದು ಮತ್ತು ಭವಿಷ್ಯ ರೂಪಿಸಿಕೊಳ್ಳಲು ಮಾರ್ಗ ದರ್ಶನ ನೀಡುವವರೆಲ್ಲವೂ ಗುರು ಸ್ಥಾನವನ್ನು ಅಲಂಕರಿಸುತ್ತಾರೆ. ಮಠ ಮಾನ್ಯಗಳು ಲೋಕ ಕಲ್ಯಾಣಾರ್ಥವಾಗಿ ಭಕ್ತ ವೃಂದಕ್ಕೆ ಮಾರ್ಗದರ್ಶನ ಮಾಡುವುದು ನಮ್ಮ ಸಂಸ್ಕಾರ, ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ಎಲ್ಲಿ ಗುರುವಿನ ದರ್ಶನ ಮತ್ತು ಆದರ್ಶಗಳು ನೆಲೆಸಿರುತ್ತದೆಯೋ ಅಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ.ಗುರು ಸ್ಥಾನ ಪವಿತ್ರವಾದ ವೇದಿಕೆಯಾಗಿದ್ದ, ಈ ಸ್ಥಾನದ ಮೂಲಕ ವಿಶ್ವದ ಶಾಂತಿ ಮತ್ತು ಸಹಬಾಳ್ವೆಗಾಗಿ ನಿರಂತರವಾಗಿ ಸಂದೇಶ ನೀಡುವ ಪುಣ್ಯ ಕ್ಷೇತ್ರವಾಗಿದೆ. ಆಧ್ಯಾತ್ಮಿಕವಾಗಿ ಗುರುವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುವ ದಿವ್ಯಶಕ್ತಿ ಹೊಂದಿದ್ದು, ತನ್ನ ಭಕ್ತರು ಮತ್ತು ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದರೆ ಅಲ್ಲಿಗೆ ಧಾವಿಸಿ ಸಹಾಯ ಹಸ್ತ ಚಾಚುವ ಮತ್ತು ಮಾರ್ಗದರ್ಶನ ಮಾಡುವುದೇ ಗುರು ಪರಂಪರೆ ಆಗಿದೆ. ಶ್ರೀಮಠಕ್ಕೆ ಇಂದು ಆಗಮಿಸಿದ ಭಕ್ತ ವೃಂದವು ಸುಖ ಸಮೃದ್ದಿಯೊಂದಿಗೆ ಜೀವನ ಸಾಗಿಸಲಿ, ಸೌಹಾರ್ದತೆಯೊಂದಿಗೆ ಭಾವೈಕ್ಯತೆಯಿಂದ ಜೀವನ ಸಾಗಿಸುವುದರ ಮೂಲಕ ವಿಶ್ವವೇ ಒಂದು ಕುಟುಂಬವಾಗಿ ಸಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶ್ರೀ ಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರು, ತಾ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್.ಮಂಜುನಾಥ್, ಕಾರ್ಯದರ್ಶಿ ಹೇಮಂತ್ ಕುಮಾರ್, ಪತ್ರಕರ್ತ ರಂಗನಾಥ್, ಮಾಡಾಳು ಸೋಮಶೇಖರ್, ಶಿವಲಿಂಗಪ್ಪ, ಯಾದಾಪುರ ತೇಜಸ್, ನಟರಾಜು, ಚಂದ್ರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.