ಕನಕಗಿರಿ:
ದೇವರಿಗಿಂತ ಉನ್ನತ ಸ್ಥಾನವಿರುವ ಗುರುವಿನ ಜ್ಞಾನ ಶಿಷ್ಯನ ಬದುಕಿನಲ್ಲಿ ಬೆಳಕಾಗಿರುತ್ತದೆ ಎಂದು ಕಲಾಶ್ರೀ ಪ್ರಶಸ್ತಿ ಪುರಷ್ಕೃತ ವಿರೂಪಾಕ್ಷರೆಡ್ಡಿ ಓಣಿಮನಿ ಹೇಳಿದರು.ಪಟ್ಟಣದ ಐತಿಹಾಸಿಕ ತೊಂಡಿತೇವರಪ್ಪ(ಮುಖ್ಯಪ್ರಾಣ) ದೇಗುಲದಲ್ಲಿ ರಾಘವೇಂದ್ರಸ್ವಾಮಿ ಭಜನಾ ಮಂಡಳಿ ವತಿಯಿಂದ ಗುರುಪೂರ್ಣಮೆ ನಿಮಿತ್ತ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರು ಎನ್ನುವ ಎರಡಕ್ಷರದ ಮಹತ್ವ ಅರಿಯಲು ಸುಲಭವಾದದ್ದಲ್ಲ. ತನ್ನನ್ನು ತಾನು ಅರಿತು ಸಮಾಜದ ಒಳತಿಗೆ ಏಕಾಂಗಿಯಾಗಿ ಶ್ರಮಿಸುವ ದಿವ್ಯತೆಯಲ್ಲಿರುವ ಶರಣ ಗುರುವಾಗುತ್ತಾನೆ. ಗೌರವಕ್ಕಾಗಿ ಗುರುವಾಗದೇ ಅದರ ಅಸ್ಮಿತೆಯನ್ನು ಬುನಾದಿಯಿಂದ ತಿಳಿದು ಸದಾಕಾಲ ಜ್ಞಾನಾಮೃತ ಉಣಬಡಿಸುವವರು ಎಲ್ಲಿದ್ದರೂ ಗುರುವಾಗಿಯೇ ಇರುತ್ತಾರೆ. ನಿಸ್ವಾರ್ಥ, ಪ್ರಾಮಾಣಿಕತೆಯುಳ್ಳ ಗುರುಗಳು ಪ್ರಸಕ್ತ ದಿನಗಳಲ್ಲಿ ಸಿಗುವುದು ಅಪರೂಪ. ಈ ನಡುವೆ ನಮ್ಮನ್ನು ನಾವು ಅರಿತು ಗುರುವಿನ ಜ್ಞಾನ ಸ್ವೀಕಾರ ಮಾಡಿಕೊಂಡು ಜೀವನ ನಡೆಸಬೇಕು ಎಂದು ತಿಳಿಸಿದರು.ಸಂಘದ ಅಧ್ಯಕ್ಷ ರಾಮಣ್ಣ ಗುಂಜಳ್ಳಿ ಮಾತನಾಡಿ, ದಾಸ ಹಾಗೂ ಶರಣ ಸಾಹಿತ್ಯದಲ್ಲಿ ೩೦ಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಪ್ರಾಣೇಶ ಆಚಾರ್, ತೊಂಡೆಪ್ಪ ಕುಂಡೇರ, ಪರಂಧಾಮರೆಡ್ಡಿ ಭೀರಹಳ್ಳಿ, ಕಂಠೆಪ್ಪ ಪೂಜಾರ ಹಾಗೂ ಹನುಮಂತರೆಡ್ಡಿ ಮಹಲಿನಮನಿ ಅವರಿಗೆ ಸಂಘದಿಂದ ಸನ್ಮಾನಿಸಲಾಗಿದೆ ಎಂದರು.
ಇದಕ್ಕೂ ಮೊದಲು ವಿವಿಧ ದಾರು, ಕಲಿಯುಗದ ಕಾಮಧೇನು ರಾಘವೇಂದ್ರಸ್ವಾಮಿಗಳ ಹಾಗೂ ವಿವಿಧ ದೇವರುಗಳ ಭಜನಾ ಪದಗಳನ್ನು ಹಾಡಿ ಭಕ್ತಿ-ಭಾವ ಮರೆದರು.ಪ್ರಮುಖರಾದ ಭೀಮರೆಡ್ಡಿ ಓಣಿಮನಿ, ಸುರೇಶರೆಡ್ಡಿ ಮಹಲಿನಮನಿ, ಅಂಬೋಜೀರಾವ್ ಬೊಂದಾಡೆ, ಸುರೇಶಪ್ಪ ಬೊಂದಾಡೆ, ಮೃತ್ಯುಂಜಯ್ಯಸ್ವಾಮಿ ವಸ್ತ್ರದ, ಶಿವಪ್ಪ ಅಂಕಸದೊಡ್ಡಿ, ಶ್ರೀನಿವಾಸರೆಡ್ಡಿ, ಅಂಬಣ್ಣ ಹೂಗಾರ, ಸಂಗಯ್ಯಸ್ವಾಮಿ, ವಿನಯ ಪತ್ತಾರ, ರಾಮಣ್ಣ ಗುಂಜಳ್ಳಿ, ಕಲೀಲಸಾಬ್, ವೀರೇಶ ವಸ್ತ್ರದ, ಕರುಣಾಕರ ರೆಡ್ಡಿ, ಈರಣ್ಣ ಶ್ರೇಷ್ಠಿ, ರಮೇಶ ಶೆಟ್ಟರ್ ಸಿರಿವಾರ, ಬಸವರಾಜ, ನಾಗರೆಡ್ಡಿ ಸೇರಿದಂತೆ ಇತರರು ಇದ್ದರು.