ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ತಮ್ಮ ರಾಜಕೀಯದುದ್ದಕ್ಕೂ ಒಂದೇ ಪಕ್ಷಕ್ಕೆ ಅಂಟಿಕೊಂಡು ಪಕ್ಷ ಸಂಘಟಿಸುತ್ತಲೇ ಮತ್ತೊಬ್ಬರಿಗೆ ಅಗ್ರ ಪಂಕ್ತಿಯಾಗಿದ್ದ ಜೆ.ಎನ್.ಕೋಟೆ ಗುರುಸಿದ್ದಪ್ಪ ಚಿತ್ರದುರ್ಗ ನೆಲದ ನಿಜದನಿಯ ರಾಜಕಾರಣಿ ಎಂದು ಕರ್ನಾಟಕ ಪ್ರದೇಶ ಜನತಾದಳದ ಪ್ರಧಾನ ಕಾರ್ಯದರ್ಶಿ ಮತ್ತು ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಬಣ್ಣಿಸಿದರು.ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಸಿದ್ದಪ್ಪ ಅವರು ತಮ್ಮ ಜೀವನ ಹಾಗೂ ರಾಜಕೀಯದಲ್ಲೂ ಯಾವುದೇ ರೀತಿಯ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿದವರು. ಹಣ, ಅಧಿಕಾರಕ್ಕೆ ಅಸೆಪಡದ ತಮ್ಮ ಪಾಲಿನ ಕೆಲಸವನ್ನು ಮಾಡಿಕೊಂಡು ಮಾರ್ಗದರ್ಶಿಗಳಾಗಿದ್ದರು ಎಂದರು.
ಪ್ರಸ್ತುತ ರಾಜಕಾರಣವೆಂದರೆ ಅವಕಾಶವಾದಿ ಹಾಗೂ ಅನುಕೂಲ ಸಿಂಧು ತನವ ಅವಲಂಭಿಸಿದೆ. ತಮ್ಮ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದರೆ ರಾತ್ರೋ ರಾತ್ರಿ ಪಕ್ಷಗಳಿಗೆ ಜಿಗಿದು ಹೋಗುವವರ ಕಂಡಿದ್ದೇವೆ. ಆದರೆ ಗುರುಸಿದ್ದಪ್ಪ ಅವರದು ಅಪರೂಪದ ವ್ಯಕ್ತಿತ್ವ. ಅವರು ಪಕ್ಷ ನಿಷ್ಠೆಗೆ ಅಪರೂಪದ ಉದಾಹರಣೆಯಾಗಿದ್ದರು. ಅಂತಹ ವ್ಯಕ್ತಿಯನ್ನು ಕಳೆದುಕೊಂಡು ಜೆಡಿಎಸ್ ಬಡವಾಗಿದೆ ಎಂದರು.ಗುರುಸಿದ್ದಪ್ಪ ಯಾವಾಗಲೂ ಬೇರೆಯವರಿಗೆ ಒಳ್ಳೇಯದನ್ನೇ ಬಯಸುತ್ತಿದ್ದರು. ಸೇಡು, ಆಕ್ರೋಶ ಎಂಬುದು ಅವರ ಬಳಿ ಎಂದಿಗೂ ಸುಳಿದಾಡಲೇ ಇಲ್ಲ. ನಗುತ್ತಲೇ ಎಲ್ಲವನ್ನು ನಿಭಾಯಿಸುತ್ತಿದ್ದರು. ಚಿತ್ರದುರ್ಗ ಜಿಲ್ಲೆ ರಾಜಕಾರಣದಲ್ಲಿ 50 ವರ್ಷದಷ್ಟು ಸುದೀರ್ಘ ಅವಧಿಯವರೆಗೆ ಸಕ್ರಿಯವಾಗಿದ್ದರೂ ಯಾವುದೇ ರೀತಿಯ ಆಸ್ತಿ, ಹಣ, ಮಾಡದೇ ಮಾದರಿ ರಾಜಕಾರಣಿಯಾಗಿದ್ದರು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಕ್ಷದಿಂದ ಎಲ್ಲಿಯೇ ಕಾರ್ಯಕ್ರಮವಾದರೂ ಅಲ್ಲಿ ಭಾಗಿಯಾಗಿ ನಿಷ್ಠೆ ಪ್ರದರ್ಶಿಸುತ್ತಿದ್ದರು.ಸರಳ ಜೀವನ ಹಾಗೂ ಮಿತಭಾಷಿತನ ಅವರ ಮೂಲ ಗುಣವಾಗಿತ್ತೆಂದರು.ಜೆಡಿಎಸ್‌ನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕಂದಿಕೆರೆ ಡಿ.ಯಶೋಧರ ಮಾತನಾಡಿ, ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಬೇರೆ ಪಕ್ಷಕ್ಕೆ ಹೋಗಬಹುದಾಗಿತ್ತು. ಅ ಸಮಯದಲ್ಲಿ ಸಾಕಷ್ಟು ಆಫರ್‌ಗಳು ಬಂದಿದ್ದರೂ ತಿರಸ್ಕಾರ ಮಾಡಿ ಜೆಡಿಎಸ್‌ನಲ್ಲಿಯೇ ತಮ್ಮ ಶಕ್ತಿ ಪ್ರದರ್ಶಿಸಿದರು. 80 ವರ್ಷ ದಾಟಿದರೂ ಯುವಕನಂತೆ ಪಕ್ಷಸಂಘಟನೆಯಲ್ಲಿ ತೊಡಗಿದ್ದರೆಂದರು.
ಜಿಲ್ಲಾ ಅಧ್ಯಕ್ಷ ಎಂ ಜಯಣ್ಣ ಮಾತನಾಡಿ, ಜಿಲ್ಲೆಯಲ್ಲಿ ಗುರುಸಿದ್ದಪ್ಪರವರನ್ನು ದ್ವೇಷ ಮಾಡುವವರು ಯಾರೂ ಇಲ್ಲ. ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದ ಅವರು ಯುವಜನರಿಗೆ ಮಾರ್ಗದರ್ಶಿಗಳಾಗಿದ್ದರು. ರಾಜಕೀಯ ಕಾಲದಲ್ಲಿ ಹಲವಾರು ಜನರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಯಾರಿಂದಲೂ ಯಾವುದೇ ಸಹಾಯ ಬಯಸಿಲ್ಲ. ಅವರ ನಿಧನದಿಂದ ನಮ್ಮ ಪಕ್ಷಕ್ಕೆ ಮಾರ್ಗದರ್ಶಕರು ಇಲ್ಲದಂತಾಗಿದೆ ಎಂದರು.ಜೆಡಿಎಸ್‌ನ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾರ್ಯಧ್ಯಕ್ಷ ಜಿ.ಬಿ ಶೇಖರ್, ಚಿತ್ರದುರ್ಗ ತಾಲೂಕು ಘಟಕದ ಅಧ್ಯಕ್ಷ ಸಣ್ಣತಿಮ್ಮಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ, ರುದ್ರಪ್ಪ, ಚಂದ್ರಣ್ಣ, ಚಂದ್ರಶೇಖರ್, ರಾಜ್ಯ ಕಾರ್ಯದರ್ಶಿ ಎಂ.ಕೆ.ಹಟ್ಟಿಯ ವೀರಣ್ಣ, ಮೊಳಕಾಲ್ಮೂರು ಅಧ್ಯಕ್ಷ ಕರಿಬಸಪ್ಪ, ನೇಕಾರ ಘಟಕದ ಅಧ್ಯಕ್ಷ ಲಿಂಗರಾಜು, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಗೀತಾ, ರಾಜ್ಯ ಎಸ್.ಸಿ ಘಟಕದ ಕಾರ್ಯದರ್ಶಿ ರಮೇಶ್, ರಾಜ್ಯ ಯುವ ಘಟಕದ ಕಾರ್ಯದರ್ಶಿ ಹನುಮಂತರಾಯಪ್ಪ, ಗುರುಸಿದ್ದಪ್ಪರವರ ಪತ್ನಿ ಸಾಕಮ್ಮ, ಮಗ ಸಿದ್ದೇಶ್, ಹಿರಿಯೂರು ತಾಲೂಕಿನ ಘಟಕದ ಅಧ್ಯಕ್ಷ ಹನುಮಂತ ರಾಯಪ್ಪ ಇದ್ದರು.