ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಗುರುಸ್ಪಂದನಾ ಕಾರ್ಯಕ್ರಮ ಸಹಕಾರಿ: ಕೃಷ್ಣಪ್ಪ

KannadaprabhaNewsNetwork | Published : Jan 23, 2024 1:51 AM

ಸಾರಾಂಶ

ಶಿರಾ ತಾಲೂಕಿನ ಬುಕ್ಕಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುಸ್ಪಂದನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಶಿರಾ

ಶಿಕ್ಷಕರು ತಮ್ಮ ಕೆಲಸಗಳಿಗೆ ಕಚೇರಿಗೆ ಅಲೆಯದೆ, ತಮಗೆ ದೊರೆಯುವ ಬೋಧನಾ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಂಡು, ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿ ಎಂಬ ಉದ್ದೇಶದಿಂದ ಗುರುಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ ಹೇಳಿದರು.

ತಾಲೂಕಿನ ಬುಕ್ಕಾಪಟ್ಟಣ ಸರಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಗುರುಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ನೌಕರನಿಗೂ ಅವರ ಸೇವಾ ವಹಿ ಹಾಗೂ ಸಿಗುವ ಸೌಲಭ್ಯಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಪಡೆಯಬೇಕೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಅವಶ್ಯಕ. ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಿಬ್ಬಂದಿಗಳು ಪರಿಶೀಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತದೆ. ಎಲ್ಲಾ ಶಿಕ್ಷಕರು ತಮ್ಮ ಸೇವಾ ವಹಿಯಲ್ಲಿ ಪ್ರತಿಯೊಂದು ವಿಷಯವನ್ನೂ ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.

ವಿವಿಧ ವಿಭಾಗಗಳಲ್ಲಿ ಶಿಕ್ಷಕರಿಗೆ ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರು ತಮ್ಮ ಸೇವಾ ವಹಿಯಲ್ಲಿ ನಾಮನಿರ್ದೇಶನ, ಕುಟುಂಬ ಸದಸ್ಯರ ವಿವರ, ಕಾಲಮಿತಿ ವೇತನ ಬಡ್ತಿ, ಗಳಿಕೆ ರಜೆ ನಮೂದು, ಸೇವಾ ಬಡ್ತಿ, ಆರ್ಥಿಕ ಸೌಲಭ್ಯ, ಮುಂತಾದ ಅಂಶಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ನಮೂದು ಮಾಡಿಸಿಕೊಂಡು, ಎಲ್ಲಾ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಂಡುಕೊಂಡರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕ ಕೆ. ಶಿವಪ್ರಸಾದ್, ಅಧೀಕ್ಷಕ ಕೆ.ಎಚ್. ಜಯರಾಮು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮೂರ್ತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಕಾರ್ಯದರ್ಶಿ ಗೀತಾ, ನಿರ್ದೇಶಕರಾದ ಸಿ.ಎಂ. ಮಲ್ಲೇಶ್, ಆರ್‌. ದೇವರಾಜು, ಪ್ರಭಾಕರ್, ಶಿಕ್ಷಣ ಸಂಯೋಜಕ ಎಂ. ಅಣ್ಣಯ್ಯ, ಹೋಬಳಿಯ ಎಲ್ಲಾ ಸಿ.ಆರ್‌.ಪಿ.ಗಳು ಹಾಜರಿದ್ದರು.

Share this article