ಕುಂದಗೋಳ: ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಶಿಕ್ಷಣದ ಮೂಲಕ ಬೆಳಕು ಹರಿಸಿದ ಶಿಕ್ಷಕರ ಬಳಗವನ್ನು ಎರೆ(ಕಪ್ಪು)ಯ ನಾಡಿನ ಅಕ್ಷರ ಕೃಷಿಕರಿಗೆ ಗುರುವಂದನೆ ಕಾರ್ಯಕ್ರಮದಡಿ 1994-95 ನೇ ಸಾಲಿನ ಎಸ್‌ಎಲ್‌ಸಿಎಲ್‌ಸಿ ವಿದ್ಯಾರ್ಥಿಗಳು 30 ವರ್ಷಗಳ ನಂತರ ಶಾಲಾ ಆವರಣದಲ್ಲಿ ನೆರೆದು ತಮಗೆ ಅಕ್ಷರಧಾರೆ ಎರೆದ ಗುರುಗಳನ್ನು ಗೌರವಿಸಿ ಸಂಭ್ರಮಿಸಿದರು.
ನಿವೃತ್ತ ಪ್ರಾಚಾರ್ಯ ಎ.ಎಲ್. ಪೊಲೀಸ್ ಪಾಟೀಲ ಮಾತನಾಡಿ, 1980ರ ಪ್ರಾರಂಭಿಕ ದಿನಗಳಲ್ಲಿ ಸಾರಿಗೆ ಸಂಪರ್ಕಗಳು, ವಸತಿ, ಊಟ, ಉಪಾಹಾರ ಸೌಕರ್ಯಗಳು ಇಲ್ಲದ ಕುಗ್ರಾಮ ರೊಟ್ಟಿಗವಾಡ ಗ್ರಾಮದಲ್ಲಿ ಶಿಕ್ಷಣಪ್ರೇಮಿ ಜಿ.ಎಸ್. ಪಾಟೀಲರು ಪಣತೊಟ್ಟು ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದರು. ಅದರ ಫಲವಾಗಿ ರೊಟ್ಟಿಗವಾಡ, ಉಮಚಗಿ, ಕೊಂಕಣ ಕುರಹಟ್ಟಿ, ಕೊಡ್ಲಿವಾಡ, ಬರದ್ವಾಡ ಸೇರಿದಂತೆ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಯಿತು. ಸಂಸ್ಥೆ ಪುನಃ ತನ್ನ ಹಳೆಯ ವೈಭವ ಪಡೆಯುವಂತಾಗಬೇಕು ಎಂದು ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ ಅಶೋಕ ಈರಗಾರ ಮಾತನಾಡಿ, ಈ ಗ್ರಾಮದಲ್ಲಿ ಕನ್ನಡ ಗಂಡುಮಕ್ಕಳ ಶಾಲೆ ಹಾಗೂ ಜಿ.ಕೆ. ಹಿರೇಗೌಡ್ರ ಪ್ರೌಢಶಾಲೆಗಳ ಕಾರಣದಿಂದಾಗಿ ವಿದ್ಯೆಯ ಬೆಳಕು ಹರಡಲು ಸಾಧ್ಯವಾಯಿತು. 30 ವರ್ಷಗಳ ನಂತರವೂ ವಿದ್ಯಾರ್ಥಿಗಳು ತಮಗೆ ಪಾಠ ಹೇಳಿದ ಗುರುಬಳಗವನ್ನು ಮರೆಯದೇ ಶಾಲೆಗೆ ಆಹ್ವಾನಿಸಿ ಗೌರವಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದರು.ನಿವೃತ್ತ ಶಿಕ್ಷಕ ಎಚ್.ಜಿ. ದುರಗಣ್ಣವರ ರಚಿಸಿದ ಹೋರಾಟಮಯ ಜೀವನ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ನಿವೃತ್ತ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ಬಿ.ಎಚ್. ಕುಲಮಿ, ಎಚ್.ಜಿ. ದುರಗಣ್ಣವರ, ಆರ್.ಎನ್. ನರಗುಂದ, ಎ.ಎಫ್. ಈರಗಾರ, ಆರ್.ಎಸ್. ಕರದ್ಯಾಮನಗೌಡ್ರ, ಎಂ.ಎಂ. ನರಗುಂದ ಅವರನ್ನು ಸನ್ಮಾನಿಸಲಾಯಿತು.