ಕನ್ನಡಪ್ರಭ ವಾರ್ತೆ ಬೀದರ್
ಮೇ 10 ಹಾಗೂ 11ರಂದು ಸರಸ್ವತಿ ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಗುರುವಂದನಾ ಹಾಗೂ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರಸ್ವತಿ ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಬಸವೇಶ್ವರ ಬಿಇಡಿ ಕಾಲೇಜಿನ ಪ್ರಾಧ್ಯಾಪಕಿ ವೀಣಾ ಜಲಾದೆ ಹೇಳಿದರು.ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 1991ರಿಂದ 2005ರ ವರೆಗಿನ ಸುಮಾರು 2 ಸಾವಿರ ಹಳೆ ವಿದ್ಯಾರ್ಥಿಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. 150 ನಿವೃತ್ತ ಶಿಕ್ಷಕರಿಗೆ ಇದೇ ವೇಳೆ ಸನ್ಮಾನಿಸಲಾಗುತ್ತದೆ ಎಂದರು.
ಮೇ 10ರಂದು ಬೆಳಗ್ಗೆ ನಗರದ ಸರಸ್ವತಿ ಶಾಲೆ ಅವರಣದಲ್ಲಿ ಬಸವ ಜಯಂತಿ ಹಾಗೂ ಕ್ರೀಡೋತ್ಸವ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸರಸ್ವತಿ ಶಾಲೆಯ ಹಿರಿಯ ಶಿಕ್ಷಕಿ ಸುಲೋಚನಾ ಅಕ್ಕ ನೆರವೇರಿಸಲಿದ್ದು, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ನಾರಾಯಣರಾವ್ ಮುಖೇಡಕರ್ ಗೌರವ ಉಪಸ್ಥಿತರಿರುವರು. ಶಾಲೆಯ ಹಿರಿಯ ಶಿಕ್ಷಕ ಭಗುಸಿಂಗ್ ಜಾಧವ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಸ್ಥೆಯ ಕಾರ್ಯದರ್ಶಿ ಹಣಮಂತರಾವ್ ಪಾಟೀಲ ಅಧ್ಯಕ್ಷತೆ ವಹಿಸುವರು. ವಿದ್ಯಾರ್ಥಿ ಪ್ರತಿನಿಧಿಗಳಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ರವಿ ಮೂರ್ತಿ ಪಾಲ್ಗೊಳ್ಳುವರು ಎಂದು ತಿಳಿಸಿದರು.ಈ ತಿಂಗಳ 11ರಂದು ಪಾಪನಾಶ ಗೇಟ್ ಒಳಗಡೆ ಇರುವ ಶ್ರೀ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಜರುಗಲಿದೆ. ಶಾಲೆಯ ಹಿರಿಯ ಶಿಕ್ಷಕಿ ಅಕ್ಕ ಉದ್ಘಾಟಿಸಲಿದ್ದು, ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್ ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಂಗಳೂರು ರೂಟ್ಸ್ ಐಂಡ್ ಬ್ರಾಂಚೆಸ್ ರಿಸರ್ಚ್ ಫೌಂಡೇಶನ್‌ನ ಜಿಆರ್ ಜಗದೀಶ ವಕ್ತಾರರಾಗಿ ಪಾಲ್ಗೊಳ್ಳುವರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ. ಎಸ್‌ಬಿ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸುವರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷಳಾಗಿ ತಾನು ಅಂದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗಿಯಾಗುವುದಾಗಿ ವೀಣಾ ಜಲಾದೆ ಹೇಳಿದರು.
ಅಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಲಿದ್ದು, ಶಾಲೆಯ ಹಿರಿಯ ಶಿಕ್ಷಕಿ ದಾಕ್ಷಾಯಣಿ ಅಕ್ಕ ಹಾಗೂ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಉಪಾಧ್ಯಕ್ಷ ನಾಗೇಶ ರೆಡ್ಡಿ ಸಮಾರೋಪ ಮಾತುಗಳನ್ನಾಡುವರು.ಇನ್ನು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದರೆ ಕೂಡಲೇ ರವಿ ಮೂರ್ತಿ- 9902392827, ವಿರೇಶ ಸ್ವಾಮಿ- 9008240222, ಸತೀಶ ಸ್ವಾಮಿ- 9845455579 ಈ ದೂರವಾಣಿಗಳನ್ನು ಸಂಪರ್ಕಿಸಿ ತಮ್ಮ ಹೆಸರು ನೊಂದಾಯಿಸಿ ಕೊಳ್ಳಬಹುದೆಂದು ಪ್ರೊ. ವೀಣಾ ಕರೆ ಕೊಟ್ಟರು.
ಸುದ್ದಿಗೋಷ್ಠಿಯಲ್ಲಿ ರಾಜಕುಮಾರ ಶೀಲವಂತ, ಸತೀಶ ಸ್ವಾಮಿ, ರವಿ ಮೂರ್ತಿ, ಅನಿಲ ಮದಕಟ್ಟಿ, ವಿರೇಶ ಸ್ವಾಮಿ, ಸಂತೋಷ ಸೊರಳ್ಳಿ, ಅರುಣ ಹೊತಪೇಟ್, ಅಮರ ಶಟಕಾರ, ಪ್ರಕಾಶ, ಪುಷ್ಪಕ ಜಾಧವ್ ಉಪಸ್ಥಿತರಿದ್ದರು.