ಹೊಂಡಗುಂಡಿಗಳಿಂದ ತುಂಬಿರುವ ಗುರುವಾಯನಕರೆ- ಉಪ್ಪಿನಂಗಡಿ ರಸ್ತೆ

KannadaprabhaNewsNetwork | Published : Oct 17, 2024 1:00 AM

ಸಾರಾಂಶ

ತಾಲೂಕಿನ ಪ್ರಮುಖ ರಸ್ತೆಯ ಬಗ್ಗೆ ಆಡಳಿತ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದನ್ನು ಪ್ರತಿ ನಿತ್ಯ ಪ್ರಯಾಣಿಸುತ್ತಿರುವ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಮಳೆಗಾಲ ಆರಂಭವಾಗುವ ತನಕ ಅತ್ಯಂತ ಸುಸ್ಥಿತಿಯಲ್ಲಿದ್ದ ಗುರುವಾಯನಕರೆ- ಉಪ್ಪಿನಂಗಡಿ ರಸ್ತೆಯು ಈಗ ಹೊಂಡಗುಂಡಿಗಳಿಂದ ಅಲಂಕೃತವಾಗಿದ್ದು, ಅಯ್ಯೋ ಯಾಕಾದರೂ ಈ ರಸ್ತೆಯಲ್ಲಿ ಬಂದೆ ಎಂಬ ಭಾವವನ್ನು ಪ್ರಯಾಣಿಕರಲ್ಲಿ ಹುಟ್ಟಿಸುತ್ತಿದೆ.

ನಿತ್ಯ ಸಾವಿರಾರು ಮಂದಿ ಸಂಚರಿಸುವ, ಸಾವಿರಾರು ವಾಹನಗಳು ಓಡಾಡುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಅಲ್ಲಲ್ಲಿ ಬೃಹತ್‌ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದು ಇಲ್ಲಿ ವಾಹನ ಚಲಾಯಿಸುವುದೇ ದುಸ್ತರ ಎನಿಸಿದೆ. ಈ ರಸ್ತೆಯ ಕೆಲವು ಭಾಗಗಳಲ್ಲಿ ಪರಿಸ್ಥಿತಿ ಎಷ್ಟೊಂದು ಭಯಾನಕವಾಗಿದೆ ಎಂದರೆ, ವಾಹನ ಸವಾರರು ಯಾವ ಕಡೆಯಿಂದ ಹೋದರೂ ಗುಂಡಿಯೊಳಗೆ ಇಳಿದೇ ಹೋಗಬೇಕು.

ರಸ್ತೆ ತುಂಬ ಗುಂಡಿಗಳೇ: ಗುರುವಾಯನಕೆರೆಯಿಂದ ಉಪ್ಪಿನಂಗಡಿಗೆ 18 ಕಿ.ಮೀ. ಇದೆ. ಇದರಲ್ಲಿ ಗುರುವಾಯನಕೆರೆಯಿಂದ ಕುಪ್ಪೆಟ್ಟಿ (ಉರುವಾಲು) ತನಕ ಅಂದಾಜು 13 ಕಿ.ಮೀ. ದೂರದ ರಸ್ತೆಯುದ್ದಕ್ಕೂ 50ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಡಿಗಳಿವೆ. ಇಲ್ಲಿನ ರಸ್ತೆಯ ಗುಂಡಿಗಳಿಗೆ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ, ಕಾಲು, ತಲೆಗೆ ಗಂಭೀರವಾದ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ ಹಲವು ನಿದರ್ಶನಗಳಿವೆ.

ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯು ಪುತ್ತೂರು ಮತ್ತು ಬೆಳ್ತಂಗಡಿ, ಧರ್ಮಸ್ಥಳ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಮಳೆಗಾಲದ ಸಮಯದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದ ಕಾರಣ, ರಸ್ತೆಯಲ್ಲೇ ನೀರು ಹರಿದು ಹೋಗುತ್ತದೆ. ಈ ಕಾರಣದಿಂದ ರಸ್ತೆಯಲ್ಲಿ ಗುಂಡಿ ಸೃಷ್ಟಿ ಆಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುವುದರಿಂದ ದಿನದಿಂದ ದಿನಕ್ಕೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನ ಸವಾರರ ಸಂಕಟ ಹೇಳತೀರದಾಗಿದೆ. ಅಕ್ಕಪಕ್ಕದ ಗ್ರಾಮೀಣ ಪ್ರದೇಶಗಳಿಂದ ಬರುವ ರಸ್ತೆಗಳು ಇದೇ ಹೆದ್ದಾರಿಯನ್ನು ಸಂಪರ್ಕಿಸುತ್ತವೆ. ಹೀಗಾಗಿ ಇದರ ಬಳಕೆ ವ್ಯಾಪಕವಾಗಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಯು ಒಂದು ಕಿ.ಮೀ. ಕೂಡ ಸರಾಗವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಪಣೆಜಾಲು, ಇಡ್ಯ, ರೇಷ್ಮೇ ರೋಡ್, ಗೇರುಕಟ್ಟೆ, ಪರಪ್ಪು, ನಾಳ, ಜಾರಿಗೆ ಬೈಲು, ಗೋವಿಂದೂರು, ಯಂತ್ರಡ್ಕ, ಮಾವಿನಕಟ್ಟೆ, ಹಲೇಜಿ ಮತ್ತು ಕುಪ್ಪೆಟ್ಟಿ ಊರುಗಳ ನಾಗರಿಕರು ಬೆಳ್ತಂಗಡಿಗೋ, ಉಪ್ಪಿನಂಗಡಿಗೋ ಹೋಗುವುದಕ್ಕೆ ಇದೇ ಪ್ರಮುಖ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ.

ತಾಲೂಕಿನ ಪ್ರಮುಖ ರಸ್ತೆಯ ಬಗ್ಗೆ ಆಡಳಿತ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದನ್ನು ಪ್ರತಿ ನಿತ್ಯ ಪ್ರಯಾಣಿಸುತ್ತಿರುವ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

Share this article