ಬೀದರ್: ನಗರದ ಹೊರವಲಯದಲ್ಲಿ ಸುಮಾರು 2.44 ಕೋಟಿ ರುಪಾಯಿ ಮೌಲ್ಯದ ಅಕ್ರಮ ಗುಟಕಾ, ಪಾನ್ ಮಸಾಲಾ ಸಂಗ್ರಹಿಸಿಟ್ಟಿದ್ದ ಸ್ಥಳ ಅಲ್ಲದೆ, ಗುಟಕಾ ತಯಾರಿಸುವ ಘಟಕದ ಮೇಲೆ ದಾಳಿ ಮಾಡಿ ಅಕ್ರಮ ಹೆಸರಿನಲ್ಲಿ ತಯಾರಿಸಲಾಗುತ್ತಿದ್ದ ಗುಟಕಾ ಮತ್ತು ಗುಟಕಾ ಕಚ್ಚಾ ಸಾಮಗ್ರಿಗಳನ್ನು ಜಪ್ತಿ ಮಾಡಿ 8 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದರು.
ಅವರು ಎಸ್‌ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಆ. 30ರಂದು ಶನಿವಾರ ಬೆಳಿಗ್ಗೆ ಗಾಂಧಿಗಂಜ್ ಪೊಲೀಸ್ ಠಾಣೆ ಹಾಗೂ ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ವಿವಿಧ ನಮೂನೆಯ ಪಾನ್ ಮಸಾಲಾ ಮತ್ತು ತಂಬಾಕು ವಸ್ತುಗಳ ಕಲಬೆರಿಕೆ ಗುಟಕಾ ಸಾಮಗ್ರಿ, ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗುಟಕಾ, ಕಚ್ಚಾ ವಸ್ತುಗಳು ಹಾಗೂ ಇದರ ಸಾಗಾಟಕ್ಕೆ ಇದ್ದ ಲಾರಿಯನ್ನು ಕೂಡ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.ಇನ್ನು, ಕೋಳಾರ ಕೈಗಾರಿಕಾ ಪ್ರದೇಶದ ಶೆಡ್‌ವೊಂದರಲ್ಲಿ ಹಾಗೂ ನಗರದ ಹೊರವಲಯದ ಬುತ್ತಿ ಬಸವಣ್ಣ ಮಂದಿರದ ಬಳಿ ಬಾಡಿಗೆ ಮನೆಯೊಂದರಲ್ಲಿ ಗುಟಕಾ ಪಾಟೆಕ್‌ಗಳು ಹಾಗೂ ಅಕ್ರಮವಾಗಿ ಗುಟಕಾ ತಯಾರಿಸಲು ಕಚ್ಚಾ ಪದಾರ್ಥಗಳಾದ 1,300ಕೆಜಿ ಅಡಿಕೆ ಪುಡಿ, 2100 ಕೆಜಿ ಪೌಡರ್, ಒಡೆಯದ 5100 ಕೆಜಿ ಅಡಿಕೆ, 1858ಕಿಲೋ ಮೆಂಥಾಲ್ ಪೌಡರ್ ಹಾಗೂ ಇನ್ನಿತರ ಕಚ್ಚಾ ಪದಾರ್ಥಗಳನ್ನು ಸಂಗ್ರಹಿಸಿಟ್ಟು ಜೋಕರ್, 5 ಎಚ್‌ಕೆ ಪಾನ್ ಮಸಾಲಾ ಮತ್ತು ಎಎಎ ಹೀಗೆ ವಿವಿಧ ಹೆಸರಿನ ಗುಟಕಾ ಪಾಕೆಟ್‌ಗಳನ್ನು ತಯಾರಿಸಿ ಹೊರ ರಾಜ್ಯಗಳಿಗೆ ಸಾಗಾಟ ಮಾಡುತಿದ್ದರು ಎಂದು ತಿಳಿದುಬಂದಿದ್ದು ಅವುಗಳನ್ನು ವಶಪಡಿಸಿಕೊಂಡು 8 ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪೊಲೀಸರ ಅತೀ ದೊಡ್ಡ ದಾಳಿ ಇದಾಗಿದೆ. ಹೀಗಾಗಿ ದಾಳಿಯಲ್ಲಿ ಪಾಲ್ಗೊಂಡ ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗುವುದು ಎಂದು ಎಸ್ಪಿ ಪ್ರದೀಪ ಗುಂಟಿ ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ (ಸೆನ್) ಎಂಡಿ ಸನದಿ, ಡಿಎಸ್‌ಬಿ ಇನ್ಸಪೆಕ್ಟರ್ ಅಡಿವೆಪ್ಪ ಬನ್ನಿ, ಗಾಂಧಿಗಂಜ್ ಸಿಪಿಐ ಆನಂದರಾವ್ ಹಾಗೂ ನ್ಯೂಟೌನ್ ಠಾಣೆಯ ಸಿಪಿಐ ವಿಜಯಕುಮಾರ ಬಾವಗೆ ಇದ್ದರು.