ಕನ್ನಡಪ್ರಭ ವಾರ್ತೆ ಕಲಬುರಗಿ
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಜೂ.13ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮೀತಿ ಅಧ್ಯಕ್ಷರಾದ ಜಗದೇವ ಗುತ್ತೇದಾರ್ ಇಂದು ಬೆಂಗಳೂರಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.ಸದರಿ ಗುತ್ತೇದಾರರ ನಾಮಪತ್ರಕ್ಕೆ ಸೂಚಕರಾಗಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಸೂಚಕರಾಗಿದ್ದರು. ಇದಲ್ಲದೆ ಜಗದೇವ ಗುತ್ತೇದಾರರ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೂ ಹಾಜರಿದ್ದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿರುವ ಟಿಕೆಟ್ ಪಡೆದಿರುವ ಪಕ್ಷದ ಎಲ್ಲಾ 8 ಅಭ್ಯರ್ಥಿಗಳಿಗೆ ಅಭಿನಂದಿಸಿದ್ದಾರೆ, ಈ ಬಾರಿ ಕಲಬುರಗಿಯ ಜಗದೇವ ಗುತ್ತೇದಾರ್ ಹಾಗೂ ರಾಯಚೂರಿನ ಬೋಸರಾಜು, ವಸಂತಕುಮಾರ್, ಬಸನಗೌಡ ಬಾದರ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಹೈಕಮಾಂಡ್ ಕಲ್ಯಾಣ ಕರ್ನಾಟಕಕ್ಕೆ ಸಿಂಹಪಾಲು ಪ್ರಾತಿನಿಧ್ಯ ನೀಡಿದೆ, ಕಲ್ಯಣ ಕರ್ನಾಟಕದ ಪ್ರದೇಶ ಸದಾಕಾಲ ಕಾಂಗ್ರೆಸ್‌ನ ಭದ್ರಕೋಟೆ. ಹೀಗಾಗಿ ಈ ಬಾಗದಲ್ಲಿ ಪಕ್ಷವನ್ನು ಇನ್ನೂ ಗಟ್ಟಿಗೊಳಿಸುವಲ್ಲಿ ಹೈಕಮಾಂಡ್‌ನ ಈ ನಿಲುವು ಹೆಚ್ಚು ಸಹಕಾರಿಯಾಗಲಿದೆ.ಕಾಂಗ್ರೆಸ್ ಹೈಕಮಾಂಡ್ ಆಗಿರುವ ಡಾ. ಮಲ್ಲಿಕಾರ್ಜುನ ಖರ್ಗೆಜಿ ಹಾಗೂ ನಾಯಕರೆಲ್ಲರೂ ಸೇರಿಕೊಂಡು ಕೈಗೊಂಡಿರುವ ಈ ನಿರ್ಣಯ ಬರುವ ದಿನಗಳಲ್ಲಿ ಕಲ್ಯಾಣ ನಾಡಿನ ಎಲ್ಲಾ 7 ಜಿಲ್ಲೆಗಳಲ್ಲಿ ಕಾಂಗ್ರೆಸ್ ಇನ್ನಷ್ಟು ಹೆಚ್ಚು ಬಲಗೊಳ್ಳುವ ವಿಶ್ವಾಸವನ್ನು ಡಾ. ಅಜಯ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಪಕ್ಷ ಸಘಟನೆಯಲ್ಲಿ ಜಗದೇವ ಗುತ್ತೇದಾರ್ ಸಾಕಷ್ಟು ಕೊಡುಗೆ ನೀಡಿದ್ದು ಪಕ್ಷದ ಮುಖಂಡರು ಅದನ್ನೆಲ್ಲ ಗಮನಿಸಿಯೇ ಅವರಿಗೆ ಎಂಎಲ್‌ಸಿ ಅವಕಾಶ ನೀಡಿದ್ದಾರೆಂದು ಹೇಳುವ ಮೂಲಕ ಡಾ. ಅಜಯ್ ಸಿಂಗ್ ಜಗದೇವ ಗುತ್ತೇದಾರ್ ಅವರಿಗೆ ಶುಭ ಕೋರಿದ್ದಾರೆ. ಇನ್ನು ಪಕ್ಷದ ಅಭ್ಯರ್ಥಿಗಳಾದ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಲ್ಕಿಸ್ ಬಾನೋ, ಐವಾನ್ ಡಿಸೋಜಾ ಹಾಗೂ ಕೆ.ಗೋವಿಂದರಾಜು ಇವರಿಗೂ ಡಾ. ಅಜಯ್ ಸಿಂಗ್ ಶುಭ ಕೋರಿದ್ದಾರೆ.