ಬೆಳೆಹಾನಿ ವಿತರಣೆ ತಾರತಮ್ಯ ಸರಿಪಡಿಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಎಚ್ಚರಿಕೆ ನೀಡಿದ್ದಾರೆ.
ನರಗುಂದ: ಹಿಂದಿನ ವರ್ಷ ಬೆಳೆಹಾನಿ ಪರಿಹಾರವನ್ನು ಸರ್ಕಾರ ಬೇಗ ಬಿಡುಗಡೆ ಮಾಡದಿದ್ದಾರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಎಚ್ಚರಿಕೆ ನೀಡಿದರು.
ಅವರು 3224ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು ಹೆಸರು, ಗೋವಿನಜೋಳ, ಈರಳ್ಳಿ, ಮೆಣಸಿಕಾಯಿ, ಬಿ.ಟಿ. ಹತ್ತಿ, ತೊಗರಿ, ಕಬ್ಬು ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಸರಿಯಾದ ಸಮಯಕ್ಕೆ ಮಳೆ ಆಗದ್ದರಿಂದ ಬೆಳೆಗಳು ನಾಶವಾಗಿವೆ. ಮುಂದೆ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸಿದ್ದಾರೆ. ಆ ಬಳಿಕ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಲಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋಯಿತು. ಬಳಿಕ ಪರಿಹಾರವೂ ಬಿಡುಗಡೆಯಾಯಿತು. ಆದರೆ ರಾಜ್ಯ ಸರ್ಕಾರ ಮುಂಗಾರು ಹಂಗಾಮಿನ ಬೆಳೆ ಹಾನಿ ವಿತರಣೆಯಲ್ಲಿ ತಾರತಮ್ಯ ಮಾಡಿದೆ. ಈ ಕುರಿತು ಈಗಾಗಲೇ ತಾಲೂಕಿನ ರೈತರು ಸರ್ಕಾರಕ್ಕೆ ಮನವಿ ನೀಡಿದ್ದಾರೆ. ಅಲ್ಲದೆ ಧರಣಿ ಕೂಡ ನಡೆಸಿದ್ದಾರೆ. ಆದರೆ ತಾರತಮ್ಯ ಸರಿಪಡಿಸದೇ ಇರುವುದು ರೈತರಿಗೆ ನೋವುಂಟು ಮಾಡಿದೆ ಎಂದು ಹೇಳಿದರು.ಇನ್ನು ಕಾಲ ಮಿಂಚಿಲ್ಲ, ಒಂದ ವಾರದಲ್ಲಿ ಬೆಳೆ ಹಾನಿ ಪರಿಹಾರ ತಾರತಮ್ಯ ಸರಿಪಡಿಸದೇ ಇದ್ದರೆ ನರಗುಂದ ಬಂದ್‌ಗೆ ಕರೆ ನೀಡಲಾಗುವುದು. ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.